ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಸುಗಮ, ಪಾರದರ್ಶಕ, ಲೋಪರಹಿತ ಚುನಾವಣೆಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದೆ. ತಮ್ಮ ಕರ್ತವ್ಯ ಅರ್ಥ ಮಾಡಿಕೊಂಡು ಬದ್ಧತೆ ಹಾಗೂ ಚುನಾವಣಾ ಕಾರ್ಯದಲ್ಲಿ ಕ್ರಿಯಾಶೀಲವಾಗಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದು ಮುಂಬರುವ ಲೋಕಸಭಾ ಚುನಾವಣಾ ಪ್ರಕ್ರಿಯೆಗೆ ನಿಯೋಜಿತಗೊಂಡಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಸಮಿತಿಗಳ ಲೋಕಸಭಾ ಚುನಾವಣೆಯ ಉಸ್ತುವಾರಿ ಅಧಿಕಾರಿಗಳ ಮೊದಲ ಹಂತದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.ಮಾನವ ಸಂಪನ್ಮೂಲ, ಚುನಾವಣಾ ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಸಾರಿಗೆ, ಸೈಬರ್ ಸೆಕ್ಯೂರಿಟಿ ಮತ್ತು ಐಟಿ, ಸ್ವೀಪ್, ಕಾನೂನು ಮತ್ತು ಸುವ್ಯವಸ್ಥೆ, ಇವಿಎಂ, ಮಾದರಿ ನೀತಿ ಸಂಹಿತೆ ನಿಗಾ ಸಮಿತಿ, ಚುನಾವಣಾ ವೆಚ್ಚ ನಿರ್ವಹಣೆ, ಬ್ಯಾಲೇಟ್ ಮತ್ತು ಅಂಚೆ ಮತಪತ್ರ ವ್ಯವಸ್ಥೆ, ಮಾಧ್ಯಮ ಸಮನ್ವಯ, ಸಂಪರ್ಕ ಯೋಜನೆ, ಮತದಾರರ ಪಟ್ಟಿ, ದೂರು ನಿರ್ವಹಣೆ ಹಾಗೂ ಮತದಾರರ ಸಹಾಯವಾಣಿ ನಿರ್ವಹಣೆ, ಚುನಾವಣೆ ದೂರುಗಳ ನಿರ್ವಹಣೆ ಸಮಿತಿ ಒಳಗೊಂಡಂತೆ ೧೪ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದೆ.ಪ್ರತಿ ಸಮಿತಿಗೆ ಚುನಾವಣಾ ಕಾರ್ಯದಲ್ಲಿ ಅನುಭವವುಳ್ಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪ್ರತಿಯೊಬ್ಬರೂ ಆಯಾ ಸಮಿತಿಯ ಕರ್ತವ್ಯ, ಚುನಾವಣೆ ಗಂಭೀರತೆ ಅರಿತುಕೊಂಡು, ತಮ್ಮ ಸಮಿತಿ ಸದಸ್ಯರೊಂದಿಗೆ ಸಮನ್ವಯೊಂದಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ೧೦,೯೬೫ ಸರ್ಕಾರಿ ನೌಕರರಿದ್ದಾರೆ, ಈ ಪೈಕಿ ಬೇರೆ ಬೇರೆ ಕಾರಣಗಳಿಂದ ಈಗಾಗಲೇ ೧,೦೨೦ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳ ಕಾರ್ಯಕ್ಕೆ ಏಳು ಸಾವಿರ ಅಧಿಕಾರಿ, ಸಿಬ್ಬಂದಿಗಳ ಅಗತ್ಯವಿದೆ. ಇದರೊಂದಿಗೆ ಎಸ್‌ಎಸ್‌ಟಿ, ವಿ.ಎಸ್‌ಟಿ ಹಾಗೂ ವಿವಿಧ ಚುನಾವಣಾ ಕಾರ್ಯಕ್ಕೆ ಉಳಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಮಿತಿಯ ನೋಡಲ್ ಅಧಿಕಾರಿಗಳು ವ್ಯವಸ್ಥಿತ ಸಿಬ್ಬಂದಿ ನಿಯೋಜನಾ ಕಾರ್ಯ ನಿರ್ವಹಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶವಿರಬಾರದು. ಇದೇ ರೀತಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ ಸಿಬ್ಬಂದಿಗಳಿಗೆ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ತರಬೇತಿ ಆಯೋಜನೆ, ತರಬೇತಿ ಸ್ಥಳ ದಿನಾಂಕ ಹಾಗೂ ಸಮನ್ವಯ ಕುರಿತಂತೆ ಚುನಾವಣಾ ತರಬೇತಿ ನೋಡಲ್ ಅಧಿಕಾರಿಗಳು ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಅಂಚೆ ಮತದಾನ,ಗೈರು ಮತದಾನ, ಸೇವಾ ಮತದಾನಗಳು, ಮತಪತ್ರ ಮುದ್ರಣ, ವೋಟರ್ ಸ್ಲಿಪ್ ವಿತರಣೆ, ಚುನಾವಣಾ ಕಾರ್ಯಕ್ಕೆ ಅಗತ್ಯವಾದ ಪತ್ರಗಳು, ಚುನಾವಣಾ ಆಯೋಗ ನಿಗದಿಪಡಿಸಿದ ನಮೂನೆಗಳ ವ್ಯವಸ್ಥಿತ ವಿತರಣೆ ಹಾಗೂ ನೀತಿ ಸಂಹಿತೆ ಮೇಲೆ ನಿಗಾ ವಹಿಸುವುದು, ಚುನಾವಣಾ ಲೆಕ್ಕಪತ್ರಗಳ ನಿರ್ವಹಣೆ, ನೀತಿ ಸಂಹಿತೆ ಘೋಷಣೆಯಾದ ತಕ್ಷಣ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ರಾಜಕೀಯ ನಾಯಕರ ಚಿತ್ರಗಳನ್ನು ತೆರವುಗೊಳಿಸುವುದು, ವೆಬ್‌ಕಾಸ್ಟಿಂಗ್, ಚುನಾವಣಾ ಸಂಬಂಧಿಸಿದ ದೂರುಗಳ ನಿರ್ವಹಣೆ, ಚುನಾವಣಾ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ನಿಯೋಜಿಸಿದ ವೀಕ್ಷಕರಿಗೆ ಅಗತ್ಯ ವ್ಯವಸ್ಥೆ, ಚುನಾವಣಾ ಕಾರ್ಯಕ್ಕೆ ಸಾರಿಗೆ ವ್ಯವಸ್ಥೆ, ಚುನಾವಣಾ ಜಾಹೀರಾತುಗಳ ದೃಢೀಕರಣ ಹಾಗೂ ಸುದ್ದಿಗಳ ಮೇಲೆ ನಿಗಾ ಒಳಗೊಂಡಂತೆ ಹಲವು ಅಂಶಗಳ ಬಗ್ಗೆ ನಿಗಾವಹಿಸಲು ನಿಯೋಜಿತಗೊಂಡ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಚುನಾವಣಾ ನಿಯಮಾವಳಿ ಹಾಗೂ ಕರ್ತವ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸುಗಮ ಚುನಾವಣೆಗೆ ನೆರವಾಗುವಂತೆ ಸೂಚನೆ ನೀಡಿದರು.ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಎನ್.ಐ.ಸಿ. ಅಧಿಕಾರಿ ಬಿ.ಬಿ.ಹೆಗಡೆ, ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ಜಿಲ್ಲಾ ಅಂಕಿ-ಸಂಖ್ಯಾಧಿಕಾರಿ ಆರ್.ಎಂ. ಭುಜಂಗ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ. ಸತ್ಯಪ್ಪ ಸಂತಿ, ಜಿಪಂ ಮುಖ್ಯಲೆಕ್ಕಾಧಿಕಾರಿ ವಸಂತಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅಂತರವಳ್ಳಿ, ಜಿಲ್ಲಾ ನೋಂದಣಾಧಿಕಾರಿ ಮಹೇಶ ಪಂಡಿತ, ಕೃಷಿ ಅಧಿಕಾರಿ ಬಸವರಾಜ ಕೊಪ್ಪದ, ವಾಲ್ಮೀಕಿ ನಿಗಮದ ಅಧಿಕಾರಿ ತೇಜರಾಜ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಶಿಗ್ಗಾಂವ ತಹಸೀಲ್ದಾರ ಹಿರೇಮಠ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.