ಅಕ್ಷರಕ್ಕೂ ಮುನ್ನ ಸಂಸ್ಕೃತಿ ಬದುಕಿತ್ತು: ಡಾ. ಎಂ.ಎಸ್. ಮೂರ್ತಿ

| Published : Mar 02 2024, 01:46 AM IST

ಸಾರಾಂಶ

ಬದುಕಿನಲ್ಲಿ ಯಾವುದು ಕೂಡ ಹೆಚ್ಚಾಗಬಾರದು. ಅಕ್ಷರವು ಸಮಾಜದ ನೆಮ್ಮದಿ ಹಾಗೂ ಶಾಂತಿಯನ್ನು ಕದಡುತ್ತಿದೆ.

ಹೊಸಪೇಟೆ: ಅಕ್ಷರಕ್ಕೂ ಮೊದಲು ಜನರ ಸಂಸ್ಕೃತಿ ಬದುಕುಳಿದಿದ್ದು, ಪ್ರಸ್ತುತ ಸಂಸ್ಕೃತಿ ಕಲುಷಿತವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಅಕ್ಷರ ಜ್ಞಾನವು ಅನುಭವದ ಸಾರ ಮೀರಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಯುಜಿಸಿ ಪಿಎಚ್‌ಡಿ 4ನೇ ಹಂತದ ಕೋರ್ಸ್‌ ವರ್ಕ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿಯ ಜ್ಞಾನದ ಮೂಲ ಮಾತು ಮತ್ತು ಅಕ್ಷರ. ಅಕ್ಷರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದೇವೆ. ಬದುಕಿನಲ್ಲಿ ಯಾವುದು ಕೂಡ ಹೆಚ್ಚಾಗಬಾರದು. ಅಕ್ಷರವು ಸಮಾಜದ ನೆಮ್ಮದಿ ಹಾಗೂ ಶಾಂತಿಯನ್ನು ಕದಡುತ್ತಿದೆ ಎಂದರು.

ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆಯನ್ನು ಸೀಮಿತ ಕ್ಷೇತ್ರದಿಂದ ಅಧ್ಯಯನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇದನ್ನು ನಾವು ಅಧ್ಯಯನ ಶಿಸ್ತಾಗಿ ನೋಡಬೇಕಾಗಿದೆ ಎಂದರು.

ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ಬಂದ ಮೇಲೆ ಸಂಸ್ಕೃತಿ ತಿರಸ್ಕರಿಸುವ ಕ್ರಿಯೆ ಪ್ರಾರಂಭವಾಯಿತು. ಕಲಾಪ್ರಕಾರಗಳು ಭಾಷಾ ಹಾಗೂ ಅಕ್ಷರಗಳನ್ನು ಮೀರಿದ್ದು. ಚಿತ್ರಕಲೆಯಲ್ಲಿ ವ್ಯಾಕರಣಗಳನ್ನು ಹುಡುಕುವ ಪ್ರಯತ್ನವಾಗಬೇಕು. ಸಂಶೋಧನೆಯಲ್ಲಿ ಏಕಮುಖಿ ಸಂಚಾರ ಸಾಲದು. ಬಹುಮುಖಿಯ ಸಂಚಾರವಾಗಬೇಕಿದೆ. ಸಾಮಾನ್ಯ ಸ್ಥಿತಿಯನ್ನು ಮೀರಿದಾಗ ಮಾತ್ರ ಸಂಶೋಧನೆಗೆ ಶ್ರೇಷ್ಠತೆ ಬರುತ್ತದೆ ಎಂದರು.

ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್, ಸಂಗೀತ ಮತ್ತು ನೃತ್ಯ ವಿಭಾಗದ ಉಪನ್ಯಾಸಕ ಎಂ. ಜ್ಯೋತಿ ನಿರ್ವಹಿಸಿದರು.