ಕನ್ನಡಪ್ರಭ ವಾರ್ತೆ ಬೆಳಗಾವಿ ಕಳೇದ ಬಾರಿಯ ಚಳಿಗಾಲದ ಅಧಿವೇಶನದಂತೆ ಈ ಬಾರಿಯೂ ಯಾವುದೇ ಲೋಪವಿಲ್ಲದಂತೆ ತಮಗೆ ಹಂಚಿಕೆಮಾಡಿದ ಕಾರ್ಯವನ್ನು ಶ್ರದ್ದೆಯಿಂದ ನಿರ್ವಹಿಸಿ ಅಧಿವೇಶನ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಳೇದ ಬಾರಿಯ ಚಳಿಗಾಲದ ಅಧಿವೇಶನದಂತೆ ಈ ಬಾರಿಯೂ ಯಾವುದೇ ಲೋಪವಿಲ್ಲದಂತೆ ತಮಗೆ ಹಂಚಿಕೆಮಾಡಿದ ಕಾರ್ಯವನ್ನು ಶ್ರದ್ದೆಯಿಂದ ನಿರ್ವಹಿಸಿ ಅಧಿವೇಶನ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚಿಸಿದರು.

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಜಿಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಭೆಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಕೊಠಡಿಯಲ್ಲಿ ಯಾವುದೇ ಸಾಮಗ್ರಿಗಳು ಕಡಿಮೆ ಆಗದಂತೆ ಕ್ರಮವಹಿಸುವುದು. ಸಂಪರ್ಕಾಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಗಳು ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳ ಪ್ರವಾಸ ಕಾರ್ಯಕ್ರಮದ ಪಟ್ಟಿ ಕುರಿತು ಅವರ ಆಪ್ತ ಸಹಾಯಕರ ಮೂಲಕ ಮಾಹಿತಿ ಪಡೆದು ಅಧಿಕಾರಿಗಳಿಗೆ ಹೊಟೆಲ್‌ಗಳಲ್ಲಿ ವಸತಿ ವ್ಯವಸ್ಥೆಗೆ ಹಂಚಿಕೆಯಾದ ಕೊಠಡಿಗಳಲ್ಲಿ ಮುಂಚಿತವಾಗಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಸಂಪರ್ಕಾಧಿಕಾರಿಯಾಗಿ ನಿಯೋಜನೆಗೊಂಡ ಅಧಿಕಾರಿಗಳು ಕಡ್ಡಾಯವಾಗಿ ಇಂಟರ್ನೆಟ್‌ ಸಂಪರ್ಕಕ್ಕಾಗಿ ಸ್ವತಃ ಡೊಂಗಲ್ ವ್ಯವಸ್ಥೆ ಮಾಡಿಕೊಂಡು ಮೇಲಾಧಿಕಾರಿಗಳು ಕೇಳಿದಾಗ ಅವರಿಗೆ ಒದಗಿಸುವುದು. ತಮ್ಮ-ತಮ್ಮ ಕೊಠಡಿಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್‌ ಮತ್ತು ಪ್ರಿಂಟರ್‌ಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಹಾಗೂ ನಿರ್ವಹಣೆಯಲ್ಲಿ ಯಾವುದಾದರು ಲೋಪ ಕಂಡು ಬಂದಲ್ಲಿ ನಿಯೋಜಿತ ತಾಂತ್ರಿಕರ ಸಹಾಯಕರ ಸಂಪರ್ಕ ಮಾಡಬೇಕು. ಅಧಿವೇಶನ ಕಾರ್ಯಕ್ಕೆ ಆಗಮಿಸಿದ ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿಕೊಡುವುದು. ಅದೇ ರೀತಿ ಅಧಿವೇಶನಕ್ಕೆ ಆಗಮಿಸಿದ ಇಲಾಖೆಯ ಮೇಲಾಧಿಕಾರಿಗಳು ಜಿಲ್ಲೆಯಲ್ಲಿನ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳ ಕ್ಷೇತ್ರ ಭೇಟಿ ನೀಡಲು ಇಚ್ಚಿಸಿದಲ್ಲಿ ಅವರಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿಕೊಡುವಂತೆ ತಿಳಿಸಿದರು.

ಅಧಿವೇಶನ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮೇಲಾಧಿಕಾರಿಗಳ ಪೋನ್ ಕಾಲ್‌ಗಳಿಗೆ ಸರಿಯಾಗಿ ಸ್ಪಂದಿಸುವುದು ಹಾಗೂ ಸಮಸ್ಯೆ ಇದ್ದಲ್ಲಿ ಜಿಪಂ ಉಪ ಕಾರ್ಯದರ್ಶಿ ಹಾಗೂ ಯೋಜನಾ ನಿರ್ದೇಶಕರಿಗೆ ನೇರವಾಗಿ ಸಂಪರ್ಕಿಸಿ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್, ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಕಚೇರಿ ವ್ಯವಸ್ಥಾಪಕ ಬಸವರಾಜ್ ಮುರುಘಾಮಠ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.