ಸಾರಾಂಶ
ಯಲ್ಲಾಪುರ: ನಾವು ಎಲ್ಲಿಂದ, ಯಾವ ಉದ್ದೇಶಕ್ಕೆ ಬಂದವರೆಂಬುದನ್ನು ಅರ್ಥ ಮಾಡಿಕೊಂಡು, ನಮ್ಮ ಧರ್ಮ, ಸಂಸ್ಕೃತಿ ಸಂರಕ್ಷಣೆಗಾಗಿ ಜವಾಬ್ದಾರಿಯರಿತು ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.
ತಾಲೂಕಿನ ಬಳಗಾರ ಕೋರೆಮಠದಲ್ಲಿ ಇತ್ತೀಚೆಗೆ ಬಳಗಾರಿನಲ್ಲಿ ನಡೆದ ಶ್ರೀ ಮಹಾಗಣಪತಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ೧೨ನೇ ವರ್ಷದ ಸಂಗೀತೋತ್ಸವ ಮತ್ತು ವಾರ್ಷಿಕ ಸಂಕಷ್ಟಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಒಳ್ಳೆಯ ಸಂಘಟನೆಗಳು ಕ್ರಿಯಾಶೀಲಗೊಂಡರೆ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಇರುವಂತಹ ಅಸಂಖ್ಯಾತ ಪ್ರತಿಭೆಗಳನ್ನು ಅನಾವರಣಗೊಳಿಸಬಹುದು. ಯುವಜನಾಂಗಕ್ಕೆ ಇಂತಹ ನಮ್ಮ ಸಂಸ್ಕೃತಿಯ ಅಭಿರುಚಿಯನ್ನು ಸ್ವೀಕರಿಸುವಂತೆ ಪ್ರೇರೇಪಿಸಬೇಕು ಎಂದರು.
ಅತಿಥಿಯಾಗಿದ್ದ ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ತಪಸ್ಸಿನೋಪಾದಿಯಲ್ಲಿ ಮಹಾದೇವಿ ಅಡಿಕೆಪಾಲ್ ಹಾಗೂ ಅವರ ಮಹಿಳಾ ತಂಡದ ಸದಸ್ಯರು ಮಾಡುತ್ತಿರುವ ಸಾಧನೆ ನಿಜಕ್ಕೂ ಶ್ಲಾಘನೀಯ. ಮಹಿಳೆಯರು ಸಾಧನೆಯ ಗುರಿಯತ್ತ ಹೊರಟರೆ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಈ ಸಂಘಟನೆ ಉದಾಹರಣೆಯಾಗಿದೆ. ಸಂಘಟನೆಗೆ ಅಗತ್ಯವಿರುವ ನೆರವು, ಸಹಕಾರ ಸದಾ ನೀಡುತ್ತೇವೆ ಎಂದರು.ಸಂಗೀತ ಶಿಕ್ಷಕ ಗಣೇಶ ಹೆಗಡೆ ನೇರ್ಲೆಮನೆ ಮಾತನಾಡಿ, ೧೨ ವರ್ಷಗಳಿಂದ ಬಳಗಾರ ಸಂಗೀತ ಶಾಲೆ ನಡೆದು ಬಂದಿದೆ. ಈ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರೂ ವಂದನಾರ್ಹರು ಎಂದರು.
ಯೋಗಮುದ್ರೆಯೊಂದಿಗೆ ಸಂಗೀತ ಕಾರ್ಯಕ್ರಮ ನಿರ್ವಹಿಸಿದ ಓಂಕಾರ ಯೋಗ ಕೇಂದ್ರದ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಆರೋಗ್ಯ ರಕ್ಷಣೆ ಹಾಗೂ ಮನುಷ್ಯರಿಗೆ ಉಪಯುಕ್ತವಾಗುವ ಯೋಗದ ಮಹತ್ವ ಮತ್ತು ಮುದ್ರೆಯ ಪ್ರಯೋಜನವನ್ನು ವಿವರಿಸಿದರು. ಕೋರೆಮಠ ದೇವಸ್ಥಾನದ ಕೃಷ್ಣ ಭಾಗವತ ಮಾತನಾಡಿದರು. ವಿ. ಸುಬ್ರಾಯ ಭಟ್ಟ ಕೇಶನ್ ವೇದಘೋಷ ಪಠಿಸಿದರು. ಜಯಲಕ್ಷ್ಮಿ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಮಹಾದೇವಿ ಅಡಿಕೆಪಾಲ್ ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಳಗಾರ ಮಾತೆಯರು ಭಜನೆ ಪ್ರಸ್ತುತಪಡಿಸಿದರಲ್ಲದೇ, ಗಾಯಕರಾದ ಗಣಪತಿ ಹೆಗಡೆ, ಗಣೇಶ್ ಹೆಗಡೆ, ವಿಭಾ ಹೆಗಡೆ ಸಾದರಪಡಿಸಿದ ಗಾಯನ ಶ್ರೋತೃಗಳಿಗೆ ರಸದೌತಣ ನೀಡಿತು. ಸತೀಶ್ ಹೆಗ್ಗಾರ್, ಗಣೇಶ್ ಹೆಗಡೆ ನೇರ್ಲೆಮನೆ(ಹಾರ್ಮೋನಿಯಂ), ಪ್ರದೀಪ್ ಕೋಟೆಮನೆ, ಗಣಪತಿ ದುರ್ಗದ, ಶ್ರೀಧರ ಚಿಟ್ಟೆಪಾಲ್(ತಬಲಾ) ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.