ಸೂಕ್ತ ದಾಖಲೆ ನೀಡಿದ್ರೆ ಮರಳು ಮಾಫಿಯಾ ವಿರುದ್ಧ ಕ್ರಮ

| Published : Jun 24 2024, 01:36 AM IST

ಸಾರಾಂಶ

ಮರಳು ಮಾಫಿಯಾದ ಬಗ್ಗೆ ಸಭೆಯ ಗಮನಕ್ಕೆ ತಂದವರು ಸೂಕ್ತ ದಾಖಲೆಯನ್ನು ನೀಡಿದರೆ ಖಂಡಿತ ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಖಂಡಿತ ತೆಗೆದುಕೊಳ್ಳುತ್ತೇವೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮರಳು ಮಾಫಿಯಾದ ಬಗ್ಗೆ ಸಭೆಯ ಗಮನಕ್ಕೆ ತಂದವರು ಸೂಕ್ತ ದಾಖಲೆಯನ್ನು ನೀಡಿದರೆ ಖಂಡಿತ ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಖಂಡಿತ ತೆಗೆದುಕೊಳ್ಳುತ್ತೇವೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆಯ ಉಪವಿಭಾಗವು ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯು ಯಾವಾಗಲೂ ದಲಿತ ಬಾಂಧವರು ಸೇರಿದಂತೆ ಎಲ್ಲ ಜನರಿಗೂ ನ್ಯಾಯ ಒದಗಿಸಿಕೊಡುವಲ್ಲಿ ಸದಾ ಸಿದ್ಧವಿದೆ. ಇದರ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸುವದು ತುಂಬಾ ಮುಖ್ಯವಾಗಿದೆ. ಪಟ್ಟಣದಲ್ಲಿ ಸೋಮವಾರ ಸಂತೆ ದಿನ ಅನೇಕ ಕಡೆಗಳಲ್ಲಿ ಕೈಗಾಡಿಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಮಾನವೀಯ ದೃಷ್ಟಿಯಿಂದ ಕೈಗಾಡಿಯಲ್ಲಿ ವ್ಯಾಪಾರ ಮಾಡುವವರ ಮೇಲೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರು ಟ್ರಾಫಿಕ್ ಸಮಸ್ಯೆಯಾಗದಂತೆ ತಮ್ಮ ವ್ಯಾಪಾರ ಮಾಡಿಕೊಂಡು ಹೋಗಬೇಕೆಂದರು.ಪಟ್ಟಣದ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಇಂಗಳೇಶ್ವರದ ಚನ್ನಮ್ಮ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಪಟ್ಟಣಕ್ಕೆ ವಿವಿಧೆಡೆಗಳಿಂದ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ವಿವಿಧೆಡೆ ಅಳವಡಿಸಲು ಅಂದಾಜು ೨೫ ಸಿಸಿ ಕ್ಯಾಮರಾಗಳು ಬೇಕಾಗಬಹುದು. ಈಗಾಗಲೇ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್‌ ವೃತ್ತದಲ್ಲಿ ಪುರಸಭೆ ಸಿಸಿ ಕ್ಯಾಮರಾ ಅಳವಡಿಸಿದೆ. ಮುಂದಿನ ದಿನಗಳಲ್ಲಿ ಉಳಿದೆಡೆ ಪುರಸಭೆ ಸಿಸಿ ಕ್ಯಾಮರಾ ಅಳವಡಿಸಬೇಕು. ಇದರಿಂದಾಗಿ ರಸ್ತೆ ಅಪಘಾತ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಇಲಾಖೆಗೆ ಅನುಕೂಲವಾಗುತ್ತದೆ. ಬೇರೆ ಊರಿಗೆ ಹೋಗಬೇಕಾದ ಸಂದರ್ಭ ಬಂದು ಮನೆಗೆ ಬೀಗ ಹಾಕುವ ಸಂದರ್ಭ ಬಂದರೆ ಆ ಮನೆಯವರು ಮನೆಯ ಮುಂದೆ ಲೈಟ್ ಹಾಕಿ ಹೋಗಬೇಕು. ಇದು ಮನೆ ಕಳ್ಳತನ ಪ್ರಕರಣ ತಪ್ಪಿಸಲು ಸಹಕಾರವಾಗುತ್ತದೆ. ಈಚೆಗೆ ಮನೆ ಕಳ್ಳತನವಾಗುತ್ತಿರುವ ಬಗ್ಗೆ ಕೆಲ ದಲಿತ ಮುಖಂಡರು ಸಭೆ ಗಮನಕ್ಕೆ ತಂದಿದ್ದಾರೆ. ಮನೆ ಕಳ್ಳತನ ಮಾಡುವ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಇಲಾಖೆಯ ಕಾರ್ಯಪ್ರವೃತ್ತವಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಈಗಾಗಲೇ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್‌ ವೃತ್ತದಲ್ಲಿರುವ ಸಿಸಿ ಕ್ಯಾಮರಾಗಳನ್ನು ಒಂದು ವಾರದಲ್ಲಿ ರಿಜಾರ್ಜ್ ಮಾಡಿಸಿ ಇದರ ಉಸ್ತುವಾರಿ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು. ಮುಂಬರುವ ದಿನಗಳಲ್ಲಿ ವಿವಿಧೆಡೆ ಕ್ಯಾಮರಾ ಅಳವಡಿಸುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದರು.

ಡಿಎಸ್‌ಎಸ್ ಮುಖಂಡ ಪರಶುರಾಮ ದಿಂಡವಾರ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಸವ ಭವನಕ್ಕೆ ಎಸ್‌ಸಿಎಸ್‌ಟಿ ಅನುದಾನ ಬಳಕೆಯಾಗಿದೆ. ಈ ಭವನಕ್ಕೆ ಬುದ್ಧ-ಬಸವ-ಅಂಬೇಡ್ಕರ್‌ ಎಂದು ನಾಮಕರಣ ಮಾಡಬೇಕು. ಭವನದ ಕೆಳಗೆ ಇರುವ ಊಟದ ಹಾಲ್‌ಗೆ ಡಾ.ಬಾಬುಜಗಜೀವನರಾಮ ಅವರು ಹೆಸರು ಇಡಬೇಕು ಎಂದು ಮನವಿ ಮಾಡಿದರು.

ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ, ಎಸ್.ಎ.ದೇಗಿನಾಳ ಮಾತನಾಡಿದರು. ಸಭೆಯಲ್ಲಿ ಪುರಸಭೆ ಸದಸ್ಯ ನೀಲಪ್ಪ ನಾಯಕ, ಮುಖಂಡರಾದ ಮಹಾಂತೇಶ ಸಾಸಾಬಾಳ, ಗುರುರಾಜ ಗುಡಿಮನಿ, ಅಶೋಕ ಚಲವಾದಿ, ರವಿ ರಾಠೋಡ, ಉಮೇಶ ನಡುವಿನಮನಿ, ಸಿದ್ರಾಮಪ್ಪ ಪಾತ್ರೋಟಿ, ಪರಶುರಾಮ ಜಮಖಂಡಿ, ಅಮರೇಶ ಕಾಮನಕೇರಿ, ವಿದ್ಯಾವಂತ ದೊಡಮನಿ ಇತರರು ವಿವಿಧ ಸಮಸ್ಯೆಗಳ ಕುರಿತು ಸಭೆಯ ಗಮನಕ್ಕೆ ತಂದರು. ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ವಹಿಸಿದ್ದರು. ಸಭೆಯಲ್ಲಿ ಪಿಐ ವಿಜಯ ಮುರಗುಂಡಿ, ಕೂಡಗಿ ಪಿಎಸ್‌ಐ ಯತೀಶ ಕೆ.ಎನ್,, ಪಿಎಸ್‌ಐಗಳಾದ ಆರ್‌.ಎಸ್.ಬೀಳಗಿ, ಮನೋಹರ ಕಂಚಗಾರ ಇದ್ದರು.

---