ನಿಯಮ ಗಾಳಿಗೆ ತೂರಿ ಯಾವುದೇ ಪರವಾನಗಿ ಇಲ್ಲದೆ ವಾಣಿಜ್ಯ ಮಳಿಗೆಗಳನ್ನಾಗಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಕನಕಗಿರಿ: ಇಲ್ಲಿನ ತಾಪಂ ಸಭಾಂಗಣದಲ್ಲಿ ವಿವಿಧ ಸಂಘಟನೆಗಳು ಸಮಸ್ಯೆಗಳ ಕುರಿತು ಸಲ್ಲಿಸಿರುವ ಮನವಿಯಲ್ಲಿನ ಬೇಡಿಕೆಗಳ ಈಡೇರಿಸುವ ಸಲುವಾಗಿ ತಹಸೀಲ್ದಾರ ಚಂದ್ರಶೇಖರ ಗಾಳಿ ಸಮ್ಮುಖದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಬುಧವಾರ ನಡೆಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಮಾತನಾಡಿ, ಪಟ್ಟಣದ ಎಪಿಎಂಸಿ ಯಾರ್ಡಿನಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದ್ದು, ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಆದರೆ, ದಲ್ಲಾಳಿಯವರು ಮತ್ತು ವ್ಯಾಪಾರಸ್ಥರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ತರಕಾರಿ ಮಾರಾಟ ಮತ್ತು ಹರಾಜು ಪ್ರಕ್ರಿಯೆಗೆ ಬೇಕಾದ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಕೂಡಲೇ ತರಕಾರಿ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಎಪಿಎಂಸಿ ಮಳಿಗೆಗಳ ಬದಲಾಗಿ ರಸ್ತೆಗೆ ಮುಖ ಮಾಡಿ ನಿರ್ಮಿಸಿಕೊಂಡು ನಿಯಮ ಗಾಳಿಗೆ ತೂರಿ ಯಾವುದೇ ಪರವಾನಗಿ ಇಲ್ಲದೆ ವಾಣಿಜ್ಯ ಮಳಿಗೆಗಳನ್ನಾಗಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನೂ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ವಿವಿಧ ಗ್ರಾಮೀಣ ರಸ್ತೆಗಳ ಕಾಮಗಾರಿ ವೇಗ ಹೆಚ್ಚಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರಿತ ವೈದ್ಯರನ್ನು ನೇಮಕ ಮಾಡಿಕೊಂಡಿದ್ದು, ಸರ್ಕಾರಿ ವೈದ್ಯರೇ ಇಲ್ಲವಾಗಿದೆ. ಸರ್ಕಾರಿ ವೈದ್ಯರ ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಹಿಂದೆ ಕಳಪೆ ಬೀಜ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿದವರ ಮೇಲೆ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಒದಗಿಸಬೇಕು. ತೋಟಗಾರಿಕೆ ಇಲಾಖೆಯ ಯೋಜನೆ ಪ್ರಭಾವಿಗಳ ಪಾಲಾಗುತ್ತಿದ್ದು, ಬಡ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದು ಅನೇಕ ವರ್ಷಗಳಿಂದ ಇಲಾಖೆಯ ಕೆಲ ಅಧಿಕಾರಿ, ಸಿಬ್ಬಂದಿ ಮಾಡುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡು ಬಡ ರೈತರಿಗೂ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ನಂತರ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ 108 ವಾಹನ ಸಮಸ್ಯೆ ಇದೆ.ಎಂಬಿಬಿಎಸ್ ಮುಗಿಸಿದ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳುವುದು ಅನಿವಾರ್ಯತೆ ಇದೆ. ಸ್ಮಶಾನಗಳಿಗೆ ತಂತಿಬೇಲಿ ಹಾಕಿ ಅಭಿವೃದ್ಧಿಪಡಿಸುವ ಬದಲು ಕೋಳಿ ತ್ಯಾಜ್ಯ ಸೇರಿದಂತೆ ನಾನಾ ರೀತಿಯ ಕಸ ಹಾಕಲಾಗುತ್ತಿದೆ. ಇದರಿಂದ ಶವ ಸಂಸ್ಕಾರಕ್ಕೆ ಬಂದವರಿಗೆ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನೂ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲಾ ಮಕ್ಕಳಿಗೆ ಕಳೆದ ಸಾಲಿನ ಶೂ, ಸಾಕ್ಸ್ ವಿತರಿಸದೆ ಕರ್ತವ್ಯದಲ್ಲಿ ನಿರ್ಲಕ್ಷ ವಹಿಸಿದ್ದಲ್ಲದೇ ಸರ್ಕಾರದ ಯೋಜನೆ ಮಕ್ಕಳಿಗೆ ಸಕಾಲಕ್ಕೆ ತಲುಪಿಸುವಲ್ಲಿ ಮುಖ್ಯಶಿಕ್ಷಕರು ವಿಫಲರಾಗಿದ್ದಾರೆ. ಕರ್ನಾಟಕ ದರ್ಶನ ಯೋಜನೆಯಿಂದಲೂ ಎಸ್ಸಿ,ಎಸ್ಟಿ ಮಕ್ಕಳು ಪ್ರವಾಸದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಅಲ್ಲದೇ ಶಾಲಾ ಮಕ್ಕಳು ಕೊಠಡಿಗಳಿಲ್ಲದೆ ಮರದ ಕೆಳಗೆ ಕುಳಿತು ಪಾಠ ಬೋಧನೆ ಮಾಡಲಾಗುತ್ತಿದ್ದರೂ ಎನ್ ಜಿಒ ಸಂಸ್ಥೆಯೊಂದಕ್ಕೆ ಬಿಇಒ ಪರವಾನಗಿ ಇಲ್ಲದೇ ಕೊಠಡಿ ನೀಡಿದ್ದಾರೆ. ಹೀಗೆ ನಾನಾ ತಪ್ಪು ಮಾಡಿರುವ ಮುಖ್ಯಶಿಕ್ಷಕ ಜಗದೀಶ ಹಾದಿಮನಿ ಅವರನ್ನು ಅಮಾನತುಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಸಂಚಾಲಕ ನೀಲಕಂಠ ಬಡಿಗೇರ ಒತ್ತಾಯಿಸಿದರು.ತಹಸೀಲ್ದಾರ ಚಂದ್ರಶೇಖರ ಗಾಳಿ ಮಾತನಾಡಿ, ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಹೊಸ ತಾಲೂಕು ಆಗಿರುವುದರಿಂದ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಹಂತ-ಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಎಪಿಎಂಸಿ ಮಾರುಕಟ್ಟೆ ವಿಚಾರವಾಗಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ವಿವಿಧ ಇಲಾಖೆಗಳಲ್ಲಿನ ರೈತರ ಸಮಸ್ಯೆ ಸಕಾಲಕ್ಕೆ ಪರಿಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಲವೆಡೆ ವೈದ್ಯರ ಕೊರತೆ ಇದೆ. ಸರ್ಕಾರಿ ವೈದ್ಯರು ಸಿಗುವುದು ಕಷ್ಟಕರವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಾಕ್ಷರತಾ ಇಲಾಖೆಯ ಸಮಸ್ಯೆಗಳ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಮಾತನಾಡಿ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ಸಕಾಲಕ್ಕೆ ಹಂಚಿಕೆ ಮಾಡದಿರುವುದು, ಕರ್ನಾಟಕ ದರ್ಶನ ಯೋಜನೆಯಿಂದ ಮಕ್ಕಳಿಗೆ ಆಗಿರುವ ಅನ್ಯಾಯದ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಎನ್ ಜಿ ಒ ಸಂಸ್ಥೆಗೆ ಶಾಲಾ ಕೊಠಡಿ ನೀಡಿರುವುದು ತಪ್ಪು. ಕೂಡಲೇ ಅದನ್ನು ವಾಪಸ್ ಪಡೆದು ಮಕ್ಕಳ ಕಲಿಕೆಗೆ ನೀಡಲಾಗುವುದು. ಬಸರಿಹಾಳ ಗ್ರಾಮದ ಸರ್ಕಾರಿ ಶಾಲೆ ಹಾಗೂ ಇಲಾಖೆಯ ಮಾನ ಹಾನಿಯಾಗುವ ರೀತಿಯಲ್ಲಿ ನಡೆದುಕೊಂಡಿರುವ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.ಈ ವೇಳೆ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ಪಿಡಿಒ ನಾಗೇಶ ಪೂಜಾರ, ಲೋಕೋಪಯೋಗಿ ಇಲಾಖೆಯ ವಿಶ್ವನಾಥ, ಕನಕಾಚಲಪತಿ ದೇವಸ್ಥಾನದ ದ್ವಿತಿಯ ದರ್ಜೆ ಸಹಾಯಕ ಸಿದ್ದಲಿಂಗಯ್ಯಸ್ವಾಮಿ, ಪಿಯು ಕಾಲೇಜಿನ ಪ್ರಾಚಾರ್ಯ ಅಮರೇಶ ದೇವರಾಳ ಸೇರಿದಂತೆ ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.