ಸಾರಾಂಶ
ಬಿ.ಆರ್.ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಬಹಿರಂಗ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿ.ಆರ್.ಪಾಟೀಲ್ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗುವಂತೆ ಪದೇಪದೇ ಹೇಳಿಕೆ ನೀಡುತ್ತಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಬಹಿರಂಗ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿ.ಆರ್.ಪಾಟೀಲ್ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿ.ಆರ್. ಪಾಟೀಲ್ ಹೇಳಿಕೆ ನೀಡಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿಗೆ ಅಸ್ತ್ರವನ್ನು ನೀಡಿದ್ದರು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಲಕ್ಕಿ ಲಾಟರಿ ಸಿಎಂ ಎಂದು ಸ್ನೇಹಿತರೊಬ್ಬರ ಬಳಿ ಮಾತನಾಡುತ್ತಿರುವ ವೀಡಿಯೋ ಬಹಿರಂಗವಾಗಿ, ಪಕ್ಷಕ್ಕೆ ಮತ್ತೆ ಮುಜುಗರವನ್ನುಂಟು ಮಾಡಿದ್ದರು.
ಈ ಎರಡೂ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ಬುಧವಾರ ಬಿ.ಆರ್. ಪಾಟೀಲ್ ಅವರಿಗೆ ಕರೆ ಮಾಡಿ ಪದೇಪದೇ ವಿವಾದಾತ್ಮಕ ಮಾತನ್ನಾಡುವುದು, ಪಕ್ಷ ಮತ್ತು ಸರ್ಕಾರದ ವಿರುದ್ಧದ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಮತ್ತೊಮ್ಮೆ ಈ ರೀತಿ ಹೇಳಿಕೆಗಳನ್ನು ನೀಡಿದರೆ ನೋಟಿಸ್ ನೀಡಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಜಾಲತಾಣದಲ್ಲಿ ನನ್ನತೇಜೋವಧೆ:
ಬಿಆರ್‌ಪಿ ಈ ನಡುವೆ, ಬುಧವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿ.ಆರ್. ಪಾಟೀಲ್, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಸ್ನೇಹಿತನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುವಾಗ ಕೆಲವೊಂದು ವಿಚಾರ ಹೇಳಿದ್ದೆ. ಆದರೆ, ಅದನ್ನು ತಿರುಚಲಾಗಿದೆ. ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯ ಅವರಿಗೆ ನಾನು ಭೇಟಿ ಮಾಡಿಸಿಲ್ಲ.
ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋದಾಗ ನಾನೂ ಅವರೊಂದಿಗಿದ್ದೆ. ಇನ್ನು, ಸಿದ್ದರಾಮಯ್ಯ ಅವರಿಗಿದ್ದ ಜನ ಬೆಂಬಲವನ್ನು ನೋಡಿ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತು. ನಾವು ಹೇಳಿದ್ದರಿಂದ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ. ಇವೆಲ್ಲವೂ ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.