ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಬಿತ್ತನೆ ಬೀಜ, ರಸಗೊಬ್ಬರ ಸೇರಿ ವಿವಿಧ ಕೃಷಿ ಪರಿಕರಗಳ ಕೃತಕ ಸೃಷ್ಟಿಸಿ, ರೈತರಿಂದ ಹೆಚ್ಚಿನ ಹಣ ಪಡೆದರೆ ಅಂಗಡಿ ಪರವಾನಗಿ ರದ್ದು ಮಾಡುವುದಲ್ಲದೆ ಕಠಿಣ ಕಾನೂನಿನ ಕ್ರಮ ಕೈಗೊಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ. ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.ಸಮೀಪದ ಸೈದಾಪುರನಲ್ಲಿ ವಿವಿಧ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಅಂಗಡಿಗಳಿಗೆ ಕೃಷಿ ತಾಂತ್ರಿಕ ವ್ಯವಸ್ಥಾಪಕ ರವೀಂದ್ರ ಮತ್ತು ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ರಸಗೊಬ್ಬರ ದಾಸ್ತಾನು, ಮಾರಾಟ ಪರವಾನಗಿ, ಮಾರಾಟದ ರಸೀದಿ, ದಾಸ್ತಾನು ಫಲಕದಲ್ಲಿನ ವಿವರ ಮತ್ತು ಆನ್‍ಲೈನ್ ದಾಸ್ತಾನು ವಿವರಗಳ ತಾಳೆ ಕುರಿತು ಪರಿಶೀಲಿಸಿದರು.
ಬಿತ್ತನೆ ಸಮಯದಲ್ಲಿ ರೈತರಿಂದ ಬೇಡಿಕೆ ಹೆಚ್ಚಾದ ವೇಳೆ, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ, ಬೀಜ ಮಾರಾಟ ಮಾಡಿದರೆ ಸಹಿಸುವುದಿಲ್ಲ, ಸರ್ಕಾರ ನಿಗದಿ ಮಾಡಿದ ದರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಬೇಕು. ಡಿಎಪಿ, ಯೂರಿಯಾ ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಸಹಿಸುವುದಿಲ್ಲ ಎಂದರು.ಖರೀದಿಸಿದ ರೈತನಿಗೆ ಅಧಿಕೃತ ಬಿಲ್ ನೀಡುವುದು, ಆಧಾರ್ ನೋಂದಣಿ ಜತೆಗೆ ಬಿಲ್ ರಸೀದಿ ಪ್ರತಿಯ ಮೇಲೆ ರೈತರ ಸಹಿ ಪಡೆಯುವುದು ಕಡ್ಡಾಯ ಎಂದು ಸುರೇಶ್ ಅಂಗಡಿಕಾರರಿಗೆ ತಾಕೀತು ಮಾಡಿದರು.
ದಾಸ್ತಾನಿನಲ್ಲಿರುವ ರಸಗೊಬ್ಬರಗಳ ವಿವರ ಮತ್ತು ದರ ಫಲಕದಲ್ಲಿ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಮಾರಾಟ ಪರವಾನಗಿ ಅಂಗಡಿಯಲ್ಲಿ ಕಾಣುವಂತೆ ಅಳವಡಿಸಬೇಕು. ರೈತರೊಂದಿಗೆ ಸ್ನೇಹಪೂರ್ವಕ ವ್ಯವಹರಿಸುವಂತೆ ಸಲಹೆ ನೀಡಿದರು.ಈ ವೇಳೆ ಕೆಲವೊಂದು ಅಂಗಡಿಗಳ ಮೇಲೆ ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 690 ಪ್ಯಾಕೇಟ್ ಹತ್ತಿ ಬೀಜಗಳನ್ನು ಜಪ್ತಿ ಮಾಡಿ, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದರು.ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳು ನಮ್ಮ ರೈತರಿಗೆ ಸುಲಭದಲ್ಲಿ ಎಟುಕುವಂತಾಗಲಿ. ನಿಗದಿತ ದರದಲ್ಲಿ ಮಾರಾಟ ಮಾಡುವ ಜತೆಗೆ ರಶೀದಿ ನೀಡುವುದು ಕಡ್ಡಾಯ. ರೈತರೂ ಅಧಿಕೃತ ಬೀಜ ಮಾರಾಟಗಾರರಿಂದಲೇ ಖರೀದಿಸಿ, ಬೆಳೆ ಕಟಾವಿನವರೆಗೆ ರಸೀದಿಯನ್ನು ಕಾಪಿಟ್ಟುಕೊಳ್ಳಿ.ಸುರೇಶ ಬಿ, ಸಹಾಯ ಕೃಷಿ ನಿರ್ದೇಶಕರು ಯಾದಗಿರಿ.