ಸಾರಾಂಶ
ಕೊಪ್ಪಳ: ಜಿಲ್ಲೆಯಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣಗಳಲ್ಲಿ ಬಾಲ್ಯವಿವಾಹ ಪ್ರಕರಣಗಳೂ ಇದ್ದು, ಘಟನಾ ನಂತರ ಪೋಕ್ಸೋ ಪ್ರಕರಣ ದಾಖಲಿಸುವುದರೊಂದಿಗೆ ಪೋಕ್ಸೋ ಪ್ರಕರಣಗಳು ನಡೆಯದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೋಕ್ಸೋ ಪ್ರಕರಣಗಳಲ್ಲಿ ಕೇವಲ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರವಲ್ಲ, ಬಾಲ್ಯವಿವಾಹದ ಪ್ರಕರಣಗಳಲ್ಲಿಯೂ ಪೋಕ್ಸೋ ಪ್ರಕರಣ ದಾಖಲಿಸಬಹುದು. ಆದ್ದರಿಂದ ಶಾಲಾ ಮಕ್ಕಳಿಗೆ ಬಾಲ್ಯವಿವಾಹ, ಅದರಿಂದಾಗುವ ದುಷ್ಪರಿಣಾಮಗಳು ಹಾಗೂ ಅದರಿಂದ ಆಗುವ ಸಾಮಾಜಿಕ, ಕೌಟುಂಬಿಕ ಮತ್ತು ಆರೋಗ್ಯದ ಪರಿಣಾಮಗಳ ಬಗ್ಗೆ ಪ್ರತಿ ಶಾಲೆಯಲ್ಲಿಯೂ ಮಕ್ಕಳಿಗೆ ಅರಿವು ಮೂಡಿಸಬೇಕು. ಗ್ರಾಮಗಳಲ್ಲಿ ನಡೆಯುವ ಮಕ್ಕಳ ಗ್ರಾಮಸಭೆ, ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಪೋಷಕರನ್ನು ಕೇಂದ್ರೀಕರಿಸಿ ಅವರಿಗೆ ಬಾಲ್ಯವಿವಾಹ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯ ತೊಡಕುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಬೇಕು. ಪ್ರೌಢಶಾಲೆಗಳಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು, ಪೋಕ್ಸೋ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯವಿರುವ ತರಬೇತಿ, ಜಾಗೃತಿ ಕಾರ್ಯಕ್ರಮಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್ ಮಾತನಾಡಿ, ತಾಲೂಕು ಮಟ್ಟದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಯಮಿತವಾಗಿ ನಿಮ್ಮ ವ್ಯಾಪ್ತಿಯ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, 2024-25ನೇ ಸಾಲಿನಲ್ಲಿ ಪ್ರಾರಂಭಿಕ 103 ಪೋಕ್ಸೋ ಪ್ರಕರಣಗಳು ಸೇರಿದಂತೆ ಮೊದಲನೇ ತ್ರೈಮಾಸಿಕದಲ್ಲಿ 17 ಪ್ರಕರಣಗಳು ದಾಖಲಾಗಿದೆ. ಅವುಗಳಲ್ಲಿ 20 ಪ್ರಕರಣಗಳು ಖುಲಾಸೆಯಾಗಿದ್ದು, 2 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 98 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ. 2024-25ನೇ ಮೊದಲನೇ ತ್ರೈಮಾಸಿಕದಲ್ಲಿ ಕೊಪ್ಪಳ ತಾಲೂಕಿನಲ್ಲಿ 21, ಗಂಗಾವತಿಯಲ್ಲಿ 5, ಕನಕಗಿರಿಯಲ್ಲಿ 7, ಕುಷ್ಟಗಿ ತಾಲೂಕಿನಲ್ಲಿ 15, ಯಲಬುರ್ಗಾ ತಾಲೂಕಿನಲ್ಲಿ 8, ತಡೆಯಾಜ್ಞೆ ಮೂಲಕ 2 ಹಾಗೂ ಬೇರೆ ಜಿಲ್ಲೆಯ ಪ್ರಕರಣಗಳಲ್ಲಿ 2 ಸೇರಿದಂತೆ ಒಟ್ಟು 60 ಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಿಸಲಾಗಿದೆ. ಕುಷ್ಟಗಿಯ ಹನುಮಸಾಗರದ 1 ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ವಿಶೇಷ ಪಾಲನಾ ಯೋಜನೆ, ಪ್ರಾಯೋಜಕತ್ವ ಯೋಜನೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಉಪಕಾರ ಯೋಜನೆ, ದತ್ತು ಕಾರ್ಯಕ್ರಮ, ಮಿಷನ್ ವಾತ್ಸಲ್ಯ, ಮಿಷನ್ ಶಕ್ತಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ, ಹೆಚ್ಚುವರಿ ಎಸ್‌ಪಿ ಹೇಮಂತ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗಂಗಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಲೋಫರ್ ರಾಂಪುರಿ, ಯುನಿಸೆಫ್‌ನ ಹರೀಶ್ ಜೋಗಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಸಿಡಿಪಿಒಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.