ಕೆಲಸ ಮಾಡದ ಸಿಬ್ಬಂದಿ ಮೇಲೆ ಕ್ರಮ

| Published : Jun 20 2024, 01:03 AM IST

ಸಾರಾಂಶ

ನೆಟ್ಟ ಸಸಿಗಳ ಪಾಲನೆ, ಪೋಷಣೆ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡದ ಸಿಬ್ಬಂದಿ, ಅಧಿಕಾರಿಗಳ ಪಟ್ಟಿ ನೀಡಿ, ನಾನೇ ಬದಲಾವಣೆ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳ ವಿರುದ್ಧ ಗುಡುಗಿದರು.

ಕನ್ನಡಪ್ರಭ ವಾರ್ತೆ ಇಂಡಿ

ನೆಟ್ಟ ಸಸಿಗಳ ಪಾಲನೆ, ಪೋಷಣೆ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡದ ಸಿಬ್ಬಂದಿ, ಅಧಿಕಾರಿಗಳ ಪಟ್ಟಿ ನೀಡಿ, ನಾನೇ ಬದಲಾವಣೆ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳ ವಿರುದ್ಧ ಗುಡುಗಿದರು.

ಪಟ್ಟಣದ ತಾಲೂಕು ಆಡಳಿತದ ಸೌಧದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಹಚ್ಚುತ್ತಿರುವ ಗಿಡಗಳು, ಮೊದಲು ಹಚ್ಚಿದ ಗಿಡಗಳ ಬಗ್ಗೆ ನಿಗಾ ವಹಿಸುವುದು ಮುಖ್ಯ. ಅರಿವಿನ ಕರ್ತವ್ಯದೊಂದಿಗೆ ಕೆಲಸ ನಿರ್ವಹಿಸದಿದ್ದರೆ ಇಲಾಖೆಗೆ ನ್ಯಾಯ ಒದಗಿಸುವುದು ಆಗುವುದಿಲ್ಲ. ಕಾನ್ಸೆಪ್ಟ್‌ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಶಾಮಿಲ್‌ಗಳಿಗೆ(ಕಟ್ಟಿಗೆ ಮಷಿನ್‌) ಹೊಸ ಅನುಮತಿ ನೀಡಬೇಡಿ. ಪ್ರತಿದಿನ ಗಿಡಗಳನ್ನು ಕತ್ತರಿಸಿ ತಂದರೆ ಗಿಡ, ಮರಗಳು ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಶಾಸಕರು, ಅರಣ್ಯ ಹೆಚ್ಚಿಗೆ ಮಾಡುವುದು, ಗಿಡ, ಮರಗಳ ರಕ್ಷಣೆ ಮಾಡುವುದು ಇಲಾಖೆಯ ಕೆಲಸವಾಗಿದೆ. ಅದನ್ನು ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಭೂ ಅಕ್ರಮ ತಡೆಗಟ್ಟಿ: ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭೂಮಿ ಅಕ್ರಮ ಪರಬಾರೆಯಂತ ಅಕ್ರಮ ಚಟುವಟಿಕೆಗಳು ನಡೆಯಬಾರದು. ಅಧಿಕಾರಿಗಳು ಅಚಾತುರ್ಯದಿಂದ ನಡೆದುಕೊಳ್ಳಬಾರದು. ಸುತ್ತೂರು ಶ್ರೀಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಈ ಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ತೆರೆಯಲು ಮನವಿ ಮಾಡಿಕೊಂಡಿದ್ದೇನೆ. ಅಂತಹ ದೊಡ್ಡ, ದೊಡ್ಡ ಶಿಕ್ಷಣ ಸಂಸ್ಥೆಯವರು ಸಂಸ್ಥೆ ತೆರೆಯಲು ಜಾಗ ಕೇಳಿದರೆ, ಸರ್ಕಾರದ ಜಾಗ ನೀಡಿದರೆ ಅವರು ಶಿಕ್ಷಣ ಸಂಸ್ಥೆ ತೆರೆಯಲು ಅನುಕೂಲವಾಗುತ್ತದೆ. ಹೀಗಾಗಿ ಸರ್ಕಾರದ ಆಸ್ತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು, ಹಂಜಗಿಯಂತ ಸರ್ಕಾರಿ ಜಾಗದ ಸಮಸ್ಯೆ ಎಲ್ಲಿಯೂ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಬೆಳೆ ಹಾನಿ ನಿಖರ ಅಂಕಿ-ಅಂಶ ನೀಡಿ: ತಾಲೂಕಿನಲ್ಲಿ ಜನವಸತಿ ಪ್ರದೇಶಗಳು ಹೆಚ್ಚಿಗೆ ಇರುವುದರಿಂದ ಜಲಧಾರೆ ಇಲ್ಲವೇ ಜೆಜೆಎಂ ಯೋಜನೆಯಡಿಯಲ್ಲಿ ಅವರಿಗೆ ನೀರಿನ ಅನುಕೂಲ ಕಲ್ಪಿಸಿಕೊಡಬೇಕು. ಜಿಲ್ಲೆಯಲ್ಲಿಯೇ ತೋಟಗಾರಿಕೆ ಬೆಳೆ ಇಂಡಿ ತಾಲೂಕಿನಲ್ಲಿ ಹೆಚ್ಚಿಗೆ ಇರುವುದರಿಂದ ಬರಗಾಲದಿಂದ ಪ್ರಕೃತಿ ವಿಕೋಪದಿಂದ ತೋಟಗಾರಿಕೆ ಬೆಳೆಗಳು ಹಾನಿಯಾದ ಬಗ್ಗೆ ನಿಖರ ಮಾಹಿತಿ ಅಂಕಿ-ಅಂಶಗಳು ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ರಸ್ತೆ ಸರಿಪಡಿಸಿ: ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಹಾಳಾಗಿದ್ದು, ಹಿರೇರೂಗಿಯಿಂದ ಅಗರಖೇಡ, ಇಂಗಳಗಿ, ಹಿರೇಬೇವನೂರ, ಚಿಕ್ಕಮಣೂರವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ಮೇಲೆ ಹೋಗುವವರು ಈ ಭಾಗದಲ್ಲಿ ಯಾರಾದರೂ ಇದ್ದಾರೋ ಇಲ್ಲೊ ಎನ್ನುವಂತಾಗಿದೆ. ರಸ್ತೆ ತಾತ್ಕಾಲಿಕವಾಗಿಯಾದರೂ ಅಭಿವೃದ್ಧಿಪಡಿಸಲು ಹೆದ್ದಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಇನ್ನೂ ರಸ್ತೆ ಸುಧಾರಣೆ ಮಾಡಿರುವುದಿಲ್ಲ. ಹಿರೇರೂಗಿಯಿಂದ ಅಗರಖೇಡ ಗ್ರಾಮದವರೆಗೆ ರಸ್ತೆ ಸಂಪೂರ್ಣ ತಗ್ಗು ದಿನ್ನೆಗಳಿಂದ ಕೂಡಿದ್ದು ಅದನ್ನು ಸರಿಪಡಿಸಬೇಕು ಎಂದು ಹೇಳಿದರು.ಕಾಲುವೆ ಎಲ್ಲ ಭಾಗಕ್ಕೂ ನೀರು ಹೋಗಲಿ: ಐಬಿಸಿ ಕಾಲುವೆ ಮೂಲಕ ಪೊಲೀಸ್‌ ಸಹಾಯದೊಂದಿಗೆ ಟೆಲ್‌ಎಂಡ್‌ವರೆಗೆ ಹಾಗೂ ಕಲ್ಲಹಳ್ಳದವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಕಾಲುವೆಯ ಎಲ್ಲ ಭಾಗಕ್ಕೂ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಐಬಿಸಿ, ಐಎಲ್‌ಸಿ, ಚಿಮ್ಮಲಗಿ, ತಿಡಗುಂದಿ ವಿಸ್ತರಣೆ, ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಈ ಎಲ್ಲ ಯೋಜನೆಗಳಿಂದ ತಾಲೂಕಿನ ಒಂದು ಎಕರೆ ಭೂಮಿ ನಮ್ಮ ಭಾಗವು ನೀರಾವರಿಯಿಂದ ಉಳಿಯಬಾರದರು. ಶಿರಕನಹಳ್ಳಿ, ಮಾವಿನಹಳ್ಳಿ ಸೇರಿದಂತೆ ಇನ್ನೂ ಮೂರು ಕೆರೆಗಳು ಉಳಿದುಕೊಂಡಿದ್ದು ಅವುಗಳನ್ನು ತುಂಬಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.ಈ ವೇಳೆ ಎಸಿ ಅಬೀದ್‌ ಗದ್ಯಾಳ, ತಹಸೀಲ್ದಾರ್‌ ಮಂಜುಳಾ ನಾಯಕ, ಡಿವೈಎಸ್ಪಿ ಜಗದೀಶ, ತಾಪಂ ಇಒ ಬಾಬು ರಾಠೋಡ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್‌.ಎಸ್‌.ಪಾಟೀಲ, ರಾಂಪೂರ ಕೆಬಿಜೆಎನ್‌ಎಲ್‌ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.ಲಿಂಬೆ ಹಾನಿಗೆ ಯಾರು ಕಾರಣ: ತೋಟಗಾರಿಕೆ ಬೆಳೆ ಅದರಲ್ಲಿ ಲಿಂಬೆ ಬೆಳೆ 100 ಎಕರೆ ಬೆಳೆ ಹಾನಿಗೆ ಯಾರು ಕಾರಣರು. ಬೇಸಿಗೆಯಲ್ಲಿ ಲಿಂಬೆ ಬೆಳೆಗೆ ನೀರು ಹಾಕಲು ಟ್ಯಾಂಕರ್‌ ಕೊಡಲಿಲ್ಲ. ಇದಕ್ಕೆ ತಾಲೂಕು ಆಡಳಿತದ ಎಸಿ, ತಹಸೀಲ್ದಾರ್ ಹಿಡಿದುಕೊಂಡು ಅಧಿಕಾರಿಗಳು ಕಾರಣ. ಇಲ್ಲಿ ತಪ್ಪಾಗಿದೆ. 100 ಎಕರೆ ಲಿಂಬೆ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಿ, ಅವರು 8 ವರ್ಷದಿಂದ ತೊಂದರೆ ಅನುಭವಿಸಿ ಬೆಳೆಸಿದದ ಲಿಂಬೆ ಬೆಳೆ ಹಾನಿಯಾದರೆ, ಅದಕ್ಕೆ ಬೆಳೆ ಪರಿಹಾರದಷ್ಟು ಪರಿಹಾರ ನೀಡಿದರೆ ಲಿಂಬೆ ಬೆಳೆಗಾರರಿಗೆ ಹೇಗೆ ಅನುಕೂಲವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಅಡಿಕೆ ಬೆಳೆ ಹಾನಿಯಾದರೆ ಶಾಶ್ವತ ಪರಿಹಾರ ನೀಡುತ್ತಾರೆ. ಅಂತಹ ಬೋರ್ಡ್‌ ಸಹಾಯ, ಸಲಹೆ ಪಡೆದುಕೊಳ್ಳಬೇಕು.ದೀರ್ಘಾವದಿ, ಶಾರ್ಟ್‌ಟರ್ಮ್‌, ಲಾಂಗ್ ಟರ್ಮ್‌ ಬೆಳೆಗಳ ಮಾಹಿತಿ ಬೆರೆ ಬೆರೆ ಮಾಡಬೇಕು. ಒಬಿರಾಯನ್‌ ಕಾಲದ ಬದಲಾವಣೆ ಮಾಡಬೇಕು. ಲಿಂಬೆ ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡಲು ಲಿಂಬೆ ಅಭಿವೃದ್ಧಿ ಮಂಡಳಿ ಅವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು, ಲಿಂಬೆ ಬೆಳೆ ಉಳಿಸಿಕೊಳ್ಳಲು ನೀರು ನೀಡದೇ ಇರುವುದು ಯಾರ ತಪ್ಪು ಎಂದು ಪ್ರಶ್ನಿಸಿದರು.