ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

| Published : Feb 11 2024, 01:45 AM IST

ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಶನಿವಾರ ಬಣ್ಣಬಣ್ಣದ ವಿವಿಧ ಗಾತ್ರಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ್ದವು. ಸೂರ್ಯಾಸ್ತಮಾನದ ಸುಂದರ ಸಂಜೆಗೆ ದೇಶ- ವಿದೇಶಗಳ ಗಾಳಿಪಟಗಳು ವಿಶೇಷ ಮೆರುಗು ನೀಡಿದ್ದವು. ಸಾವಿರಾರು ಮಂದಿ ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸೋದ್ಯಮ ಕ್ಯಾಲೆಂಡರ್‌ ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಿಗದಿತ ದಿನಾಂಕಗಳನ್ನು ನಡೆಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.ಟೀಮ್‌ ಮಂಗಳೂರು ತಂಡದ ಆಶ್ರಯದಲ್ಲಿ ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.ಪ್ರವಾಸೋದ್ಯಮಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ದಿನಾಂಕವನ್ನು ಮೊದಲೇ ನಿಗದಿ ಮಾಡಿ, ಪೂರಕ ಸಂಘ ಸಂಸ್ಥೆಗಳ ಜತೆ ಚರ್ಚಿಸಿ ಟೂರಿಸಂ ಕ್ಯಾಲೆಂಡರ್‌ ರೂಪಿಸಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರಲ್ಲಿ ಗಾಳಿಪಟ ಉತ್ಸವವೂ ಸೇರಲಿದೆ. ಪ್ರತಿವರ್ಷವೂ ಈ ಕ್ಯಾಲೆಂಡರ್‌ನಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಎಂದು ಸಚಿವರು ಹೇಳಿದರು.ಗಾಳಿಪಟ ಉತ್ಸವ ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ದೇಶ ವಿದೇಶಗಳಿಂದ ಬಹಳಷ್ಟು ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದ ದಿನೇಶ್‌ ಗುಂಡೂರಾವ್‌, ನಾನು ಕೂಡ ಇಷ್ಟು ವೈವಿಧ್ಯಮಯ ಗಾಳಿಪಟಗಳನ್ನು ಇಲ್ಲೇ ನೋಡಿದ್ದು ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಬೋಧಿಸಿದರು. ಸಂವಿಧಾನ ಜಾಗೃತಿ ಯಾತ್ರೆಯನ್ನು ಉಲ್ಲೇಖಿಸಿ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿದರು.ಮಂಗಳೂರು ನಗರದ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್‌, ಮಹಾನಗರ ಪಾಲಿಕೆ ಆಯುಕ್ತ ಆನಂದ್‌, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ ಮತ್ತಿತರರು ಇದ್ದರು.ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಗಾಳಿಪಟಗಳು: ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಶನಿವಾರ ಬಣ್ಣಬಣ್ಣದ ವಿವಿಧ ಗಾತ್ರಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ್ದವು. ಸೂರ್ಯಾಸ್ತಮಾನದ ಸುಂದರ ಸಂಜೆಗೆ ದೇಶ- ವಿದೇಶಗಳ ಗಾಳಿಪಟಗಳು ವಿಶೇಷ ಮೆರುಗು ನೀಡಿದ್ದವು. ಸಾವಿರಾರು ಮಂದಿ ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಭಾನುವಾರ ಮಧ್ಯಾಹ್ನ 3ರಿಂದ ರಾತ್ರಿ 7 ಗಂಟೆಯವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನವಿರಲಿದೆ. ಬಳಿಕ ವಿದ್ಯುತ್‌ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.ಇಂಡನೋಷ್ಯಾ, ಯುಕ್ರೇನ್‌, ಥಾಯ್ಲೆಂಡ್‌ ಸೇರಿದಂತೆ ವಿದೇಶಿ ಗಾಳಿಪಟ ಹಾರಾಟಗಾರರ ವಿಶೇಷ, ಭಾರೀ ಗಾತ್ರದ ಗಾಳಿಪಟಗಳು ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ಕೇರಳದ ಗಾಳಿಪಟ ತಂಡಗಳೂ ಉತ್ಸವದಲ್ಲಿ ಪಾಲ್ಗೊಂಡಿವೆ. ಟೀಮ್‌ ಮಂಗಳೂರು ತಂಡದ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾದ ಕಥಕ್ಕಳಿ ಗಾಳಿಪಟವನ್ನು ಪುನರ್‌ರೂಪಿಸಲಾಗಿದ್ದು, ವಿಶೇಷ ಆಕರ್ಷಣೆಯಾಗಿದೆ.