ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದೆ. ಶೀಘ್ರದಲ್ಲಿಯೇ ಹೇಮಾವತಿ ನದಿ ನೀರಿನಿಂದ ಬೂಕನಕೆರೆ ಹೋಬಳಿಯ 46 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಕ್ರಮವಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ತಿಳಿಸಿದರು.
ಕಾಮಗಾರಿ ನಿರ್ವಹಿಸುತ್ತಿರುವ ಅಮೃತ್ ನಿರ್ಮಾಣ ಸಂಸ್ಥೆ ಅಧಿಕಾರಿಗಳು ಮತ್ತು ಕೆಪಿಟಿಸಿಎಲ್ ಹಾಗೂ ಸೆಸ್ಕಾಂ ಅಧಿಕಾರಿಗಳ ತಂಡದೊಂದಿಗೆ ಕಟ್ಟಹಳ್ಳಿ ಏತ ನೀರಾವರಿ ಪ್ಲಾಂಟ್ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ತಾಲೂಕಿಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿದ್ದ ವೇಳೆ ರೈತ ಮುಖಂಡರು ಕಟ್ಟಹಳ್ಳಿ ಏತ ನೀರಾವರಿ ಮೊದಲ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಿದ್ದರು. ಕನ್ನಡಪ್ರಭದಲ್ಲೂ ಕಳೆದ 2023ರ ಡಿಸೆಂಬರ್ 21ರಂದು ಅನುದಾನ ಕೊರತೆ; ಕೆರೆ-ಕಟ್ಟೆಗಳಿಗಿಲ್ಲ ನೀರು ಎನ್ನುವ ಶೀರ್ಷಿಕೆಯಡಿ ವರದಿ ಮಾಡಿತ್ತು.
ಪತ್ರಿಕಾ ವರದಿ ಮತ್ತು ರೈತ ಮುಖಂಡರ ಮನವಿಗೆ ಸ್ಪಂದಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಕಾಮಗಾರಿ ವಸ್ತುಸ್ಥಿತಿ ವಿವರ ನೀಡುವಂತೆ ಸೂಚಿಸಿದ್ದರ ಮೇರೆಗೆ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಪ್ಲಾಂಟ್ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.260 ಕೋಟಿ ರು ವೆಚ್ಚದಲ್ಲಿ ಬೂಕನಕೆರೆ, ಶೀಳನೆರೆ ಹೋಬಳಿಯ ಒಟ್ಟು 89 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ 150 ಕೋಟಿ ಕಾಮಗಾರಿ ನಡೆದಿದೆ. ಅದರಂತೆ 46 ಕೆರೆಗಳನ್ನು ತುಂಬಿಸಲು ಅತಿ ಶೀಘ್ರವೇ ಕ್ರಮ ವಹಿಸಲಾಗುತ್ತದೆ. ಉಳಿದ 43 ಕೆರೆಗಳನ್ನು ಎರಡನೇ ಹಂತದಲ್ಲಿ ತುಂಬಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕೆಪಿಟಿಸಿಎಲ್‌ನ ಮಂಡ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅನಿಲ್ ಮಾಹಿತಿ ನೀಡಿ, ಏತ ನೀರಾವರಿ ಯೋಜನೆಯ ಪವರ್ ಪ್ಲಾಂಟ್‌ನ ಎಲ್ಲ ವಿಭಾಗಗಳನ್ನು ನನ್ನ ನೇತೃತ್ವದ ಎಂಜಿನಿಯರಿಂಗ್ ತಂಡ ಪರಿಶೀಲನೆ ಮಾಡಿದೆ.66 ಕೆವಿ ವಿದ್ಯುತ್ ಲೈನ್ ಮತ್ತು ಅಳವಡಿಸಿರುವ ವಿದ್ಯುತ್ ಉಪಕರಣಗಳ ಬಗ್ಗೆಯೂ ನಮ್ಮ ತಂಡ ಪರಿಶೀಲನೆ ನಡೆಸಿ ಎಲ್ಲವೂ ಸಮರ್ಪಕವಾಗಿದೆ. ಸಮೀಪದ ಗಂಜಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಚಾರ್ಜ್ ಮಾಡಿದರೆ ಏತ ನೀರಾವರಿ ಘಟಕಕ್ಕೆ ವಿದ್ಯುತ್ ಪ್ರವಹಿಸುತ್ತದೆ. ಏತ ನೀರಾವರಿ ಘಟಕದ ಕೆ.ಪಿ.ಟಿ.ಸಿಎಲ್ ಜವಾಬ್ದಾರಿ ಮುಗಿದಿದೆ. ವಿದ್ಯುತ್ ನಿರ್ವಹಣಾ ಘಟಕವನ್ನು ಕೆ.ಆರ್.ಪೇಟೆ ಸೆಸ್ಕಾಂ ವಿಭಾಗದ ಸ್ವಾಧಿನಕ್ಕೆ ಇನ್ನೊಂದು ದಿನದಲ್ಲಿ ನೀಡಲಾಗುವುದು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕೆಪಿಟಿಸಿಎಲ್ ನ ಎಂಜಿನಿಯರ್ ಸುನೀಲ್, ಸೆಸ್ಕಾಂ ಮಂಡ್ಯ ವಿಭಾಗದ ಎಂಜಿನಿಯರ್ ರಾಜೇಂದ್ರ, ದೇವರಾಜು, ಸೆಸ್ಕಾಂ ಕೆ.ಆರ್.ಪೇಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನುತ ಸೇರಿದಂತೆ ವಿದ್ಯುತ್ ಇಲಾಖೆ ಮತ್ತು ಅಮೃತ್ ನಿರ್ಮಾಣ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.