ಮತಾಂತರ ನಿಷೇಧ ಮಸೂದೆ ವಾಪಸ್ಸಿಗೆ ಕ್ರಮ: ಸಿಎಂ

| Published : Sep 09 2025, 01:00 AM IST

ಮತಾಂತರ ನಿಷೇಧ ಮಸೂದೆ ವಾಪಸ್ಸಿಗೆ ಕ್ರಮ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ’ ಮಸೂದೆಯನ್ನು (ಮತಾಂತರ ನಿಷೇಧ ಕಾಯ್ದೆ) ವಾಪಸ್‌ ಪಡೆಯುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ’ ಮಸೂದೆಯನ್ನು (ಮತಾಂತರ ನಿಷೇಧ ಕಾಯ್ದೆ) ವಾಪಸ್‌ ಪಡೆಯುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸೋಮವಾರ ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಆಯೋಜಿಸಿದ್ದ ಸಂತ ಮೇರಿ ಮಾತೆಯ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೋ ಅವರು ಕಾಯ್ದೆ ಸಂಬಂಧ ಕೆಲ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜತೆಗೆ ಸಮಾಲೋಚಿಸಿ ಶೀಘ್ರ ಕ್ರಮ ವಹಿಸಲಾಗುವುದು ಎಂದರು.

ದೇಶದಲ್ಲಿ ಅನೇಕ ಧರ್ಮ, ಜಾತಿ, ಸಂಸ್ಕೃತಿಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧನೆ ಮಾಡುವ ಬಗ್ಗೆ ಸರ್ಕಾರ ಬಲವಾದ ನಂಬಿಕೆ ಹೊಂದಿದೆ. ಎಲ್ಲ ಧರ್ಮವನ್ನು ಸಮಾನ ಗೌರವದಿಂದ ಕಾಣುವ ವ್ಯವಸ್ಥೆಯಲ್ಲಿ ಸರ್ಕಾರ ಬದ್ಧವಾಗಿದೆ. ಹಲವು ಸುಧಾರಕರು ಜಾತಿ ಹೋಗಿ ಮನುಷ್ಯತ್ವದಿಂದ ಬದುಕಬೇಕು ಎಂದು ಬೋಧಿಸಿದ್ದಾರೆ. ಇಷ್ಟೊಂದು ಜಾತಿ, ಧರ್ಮವಿರುವ ದೇಶದಲ್ಲಿ ಸಹಿಷ್ಣುತೆ ನಮಗಿರಬೇಕು. ಇದನ್ನು ನಮ್ಮ ಸಂವಿಧಾನವೂ ಕೂಡ ಸ್ಪಷ್ಟವಾಗಿ ಹೇಳಿದೆ. ಸಹಿಷ್ಣುತೆ ಬರದಿದ್ದರೆ ಮನುಷ್ಯತ್ವ ಬರಲು ಸಾಧ್ಯವಿಲ್ಲ ಎಂದರು.

ಕಾಯ್ದೆ ವಾಪಸ್‌ಗೆ ಈ ಹಿಂದೆಯೇ ನಿರ್ಧಾರ

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಮಸೂದೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. 2022ರಲ್ಲಿ ಉಭಯ ಸದನಗಳಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ದೊರೆತಿತ್ತು. ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2023ರ ಜೂನ್‌ ತಿಂಗಳಲ್ಲಿ ನಡೆದ ಸಂಪುಟ ಸಭೆಯಲ್ಲಿ ಕಾಯ್ದೆ ವಾಪಸ್‌ ಪಡೆಯಲು ನಿರ್ಧರಿಸಿತ್ತು. ಆದರೆ ಸರ್ಕಾರ ಈ ಸಂಬಂಧ ಕಾಯ್ದೆ ವಾಪಸ್‌ ಪಡೆಯುವ ಕುರಿತ ವಿಧೇಯಕವನ್ನು ಸದನಗಳಲ್ಲಿ ಮಂಡಿಸಿಲ್ಲ. ಈ ನಡುವೆ ಸರ್ಕಾರ ಸಹ ಕಾಯ್ದೆ ಜಾರಿಯನ್ನು ಮುಂದೂಡಿದೆ.

ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮದ ಮೂಲಕ ಸಮುದಾಯದ ಬಡವರನ್ನು ಆರ್ಥಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇವೆ. ನಿಗಮಕ್ಕೆ ₹250 ಕೋಟಿ ಘೋಷಿಸಲಾಗಿದ್ದು, ಈಗಾಗಲೇ ₹85 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಉಳಿದ ಹಣವನ್ನು ಈ ವರ್ಷ ಬಿಡುಗಡೆ ಮಾಡಲಾಗುವುದು. ಗ್ಯಾರಂಟಿ ಯೋಜನೆಗೆ ₹ 1ಲಕ್ಷ ಕೋಟಿ ಖರ್ಚು ಮಾಡಿದ್ದು ಅಸಮಾನತೆ ತೊಡೆದುಹಾಕಲು ಪ್ರಯತ್ನ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್‌ ಅರ್ಷದ್‌, ಫಾ. ಸೆಬಾಸ್ಟಿಯನ್‌ ಸೇರಿ ಇತರರಿದ್ದರು.ಮೆಟ್ರೋ ನಿಲ್ದಾಣಕ್ಕೆ ಸೇಂಟ್‌ ಮೇರಿ ನಾಮಕರಣಆರೋಗ್ಯ ಸಂಬಂಧ ಸೇಂಟ್‌ ಮೇರಿ ಬಳಿ ಸಾಕಷ್ಟು ಜನ ಹರಕೆ ಕಟ್ಟಿಕೊಳ್ಳುತ್ತಾರೆ. ಮೆಟ್ರೋ ನಿಲ್ದಾಣವೊಂದಕ್ಕೆ ಸೇಂಟ್‌ ಮೇರಿ ಹೆಸರಿಡಬೇಕು ಎಂದು ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೋ ಹಾಗೂ ಭಕ್ತರ ಬೇಡಿಕೆ ಇಟ್ಟಿದ್ದಾರೆ. ಯಾವ ಮೆಟ್ರೋ ನಿಲ್ದಾಣಕ್ಕೆ ಹೆಸರಿಡಬೇಕು ಎಂಬುದನ್ನು ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.