ದಾಸ್ತಾನು ದರ ಪಟ್ಟಿ ಹಾಕದ ಕೃಷಿ ಪರಿಕರ ಮಾರಾಟಗಾರರ ಮೇಲೆ ಕ್ರಮ: ಮಾರುತಿ ಅಂಗರಗಟ್ಟಿ

| Published : May 22 2025, 01:11 AM IST

ದಾಸ್ತಾನು ದರ ಪಟ್ಟಿ ಹಾಕದ ಕೃಷಿ ಪರಿಕರ ಮಾರಾಟಗಾರರ ಮೇಲೆ ಕ್ರಮ: ಮಾರುತಿ ಅಂಗರಗಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ರೈತರಿಗೆ 30 ಚೀಲಕ್ಕೂ ಅಧಿಕ ಯೂರಿಯಾ ಮಾರಾಟ ಮಾಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ನೀಡಿದರು.

ಹಾನಗಲ್ಲ: ಏನಾರ ಮಾಡ್ರಿ ಬಿತ್ತನೆಗಾಗಿ ಡಿಎಪಿ ಕೊರತೆ ಮಾಡಬ್ಯಾಡ್ರಿ ಎಂದು ರೈತರ ಕೂಗು, ಡಿಎಪಿಗೆ ಲಿಂಕ್ ಗೊಬ್ಬರದ ಸಂಕಟ ಸಮಸ್ಯೆ ಪರಿಹರಿಸಿ ಎಂದು ಕೃಷಿ ಪರಿಕರ ಮಾರಾಟಗಾರರ ಗೋಳು, 47 ಸಾವಿರ ಹಕ್ಟೇರ್ ಕೃಷಿ ಭೂಮಿ ಬಿತ್ತನೆಗೆ ತಾಲೂಕಿಗೆ 6 ಸಾವಿರ ಮೆಟ್ರಿಕ್ ಟನ್ ಡಿಎಪಿ ಬೇಕು, ಸ್ಟಾಕ್ ಕೇವಲ 360 ಮೆಟ್ರಿಕ್ ಟನ್ ಎಂಬ ಆತಂಕದ ವಿಷಯ ಭಾರೀ ಚರ್ಚೆ ಮೂಲಕ ಕೃಷಿ ಇಲಾಖೆಯ ಸಭೆ ಕೊನೆಗೂ ಸ್ಪಷ್ಟ ನಿರ್ಣಯಕ್ಕೆ ಬರಲಾಗಲಿಲ್ಲ.ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಕೃಷಿ ಇಲಾಖೆ, ಕೃಷಿ ಪರಿಕರ ಮಾರಾಟಗಾರರು, ಕೃಷಿಕ ಸಮಾಜ, ವಿವಿಧ ರೈತ ಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಮಹತ್ವದ ಕೃಷಿ ಗುಣ ನಿಯಂತ್ರಣ ಸಪ್ತಾಹ ಹಾಗೂ ಕೃಷಿ ಪರಿಕರ ಮಾರಾಟಗಾರರ ಚರ್ಚಾ ಸಭೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ರೈತರು, ಕೃಷಿ ಪರಿಕರ ಮಾರಾಟಗಾರರ ನಡುವೆ ಮಾತಿನ ಚಕಮಕಿಗಳೇ ನಡೆದವು. ಪರಿಹಾರಗಳು ಮಾತ್ರ ಯಾರಿಗೂ ಸಮಾಧಾನ ತರಲಿಲ್ಲ.ದಾಸ್ತಾನು ದರ ಪಟ್ಟಿ ಹಾಕದ ಕೃಷಿ ಪರಿಕರ ಮಾರಾಟಗಾರರ ಮೇಲೆ ಕ್ರಮ ಅನಿವಾರ್ಯ. ಕಡ್ಡಾಯವಾಗಿ ಮಾರಾಟವಾದ ವಸ್ತುವಿಗೆ ರಸೀದಿ ನೀಡಬೇಕು. ನಿಗದಿತ ಬೆಲೆಗೆ ಮಾರಾಟವಾಗಬೇಕು. ಪ್ರತಿ ತಿಂಗಳು ಕೃಷಿ ಇಲಾಖೆಗೆ ಸರಿಯಾದ ಮಾಹಿತಿ ನೀಡಬೇಕು. ಒಬ್ಬ ರೈತರಿಗೆ 30 ಚೀಲಕ್ಕೂ ಅಧಿಕ ಯೂರಿಯಾ ಮಾರಾಟ ಮಾಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆಗಳನ್ನು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ನೀಡಿದರು.ಕೃಷಿ ಇಲಾಖೆ ಜಿಲ್ಲಾ ಉಪಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಡಿಎಪಿಗೆ ಪರದೇಶದ ಅವಲಂಬನೆ ಇರುವುದರಿಂದ ಈ ಬಾರಿ ಆಮದು ಕೊರತೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಬೇಕು. ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಡಿಎಪಿಗೆ ಲಿಂಕ್ ರಸಾಯನಿಕ ಗೊಬ್ಬರವಾದ ಸೆಟ್‌ರೈಟ್ ಮಾರುವಂತಿಲ್ಲ. ಅಗ್ಯವಿರುವ ರೈತರಿಗೆ ಮಾತ್ರ ಅದನ್ನು ಮಾರತಕ್ಕದ್ದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಈ ಬಗ್ಗೆ ಕೃಷಿ ಪರಿಕರ ಮಾರಾಟಗಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ರಾಸಾಯನಿಕ ಗೊಬ್ಬರ ಮಾರಾಟ ಕಂಪನಿಗಳು ಡಿಎಪಿ ಗೊಬ್ಬರದ ಒಂದೂವರೆ ಪಟ್ಟು ಸೆಟ್‌ರೈಟ್‌ನ್ನು ವ್ಯಾಪಾರಸ್ಥರಿಗೆ ಒತ್ತಾಯಪೂರ್ವಕವಾಗಿ ನೀಡುತ್ತಿದ್ದಾರೆ. ಅದಿಲ್ಲದೆ ಎಷ್ಟು ಹಣ ಕೊಟ್ಟರೂ ಬರಿ ಡಿಎಪಿ ಕೊಡುತ್ತಿಲ್ಲ. ಇದು ನಮ್ಮ ವ್ಯಾಪಾರಕ್ಕೆ ಹಿಂಸೆಯಾಗಿದೆ. ರೈತರು ಇದನ್ನು ಖರೀದಿಸುವುದಿಲ್ಲ. ಕಂಪನಿಗಳು ನಮಗೆ ಕೊಡುವುದನ್ನು ಬಿಡುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಈ ವಿಷಯದ ಗಂಭೀರ ಚಿಂತೆನೆ ನಡೆದು ರೈತರು ಹಾಗೂ ವ್ಯಾಪಾರಸ್ಥರ ಸಂಕಷ್ಟ ಬಗೆಹರಿಸಬೇಕು ಎಂದು ಮನವಿ ಮಾಡಿದರು.ಬೆಳೆ ಬೆಳೆಯಲು ಸರಿಯಾದ ಗೊಬ್ಬರ ಕೊಡಲಾಗದ ಸರ್ಕಾರ ಹಾಗೂ ಇಲಾಖೆಗಳು, ಗೊಬ್ಬರ ಮಾರಾಟಗಾರರ ಮೇಲೆ ಹಿಡಿತವಿಲ್ಲದ ಅಧಿಕಾರಿಗಳು, ವ್ಯಾಪಾರದ ಅಂಗಡಿ ಪಟ್ಟಣದಲ್ಲಿವೆ. ಹಳ್ಳಿಗಳಲ್ಲಿ ಅನಧಿಕೃತವಾಗಿ ರಾಸಾಯನಿಕ ಗೊಬ್ಬರ ಸ್ಟಾಕ್ ಮಾಡಿ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಅನಧಿಕೃತವಾಗಿ ಗೊಬ್ಬರ ಮಾರುವುದು, ಗುಣಮಟ್ಟವಿಲ್ಲದ ಔಷಧಿ ಗೊಬ್ಬರ ಮಾರಾಟ ಇಂತಹ ಸಮಸ್ಯೆಗಳಿಗೆ ಕೃಷಿ ಅಧಿಕಾರಿಗಳು ಅತ್ಯಂತ ಕಠಿಣ ಕ್ರಮದ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು. ಆದರೆ ಡಿಎಪಿ ರೈತರ ಅಗತ್ಯಕ್ಕೆ ತಕ್ಕಷ್ಟು ಸಿಗುವ ಭರವಸೆ ಮಾತ್ರ ಅಧಿಕಾರಿಗಳಿಂದ ವ್ಯಕ್ತವಾಗಲಿಲ್ಲ.ಸಭೆಯ ಅಧ್ಯಕ್ಷತೆಯನ್ನು ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ವಹಿಸಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ವಿವಿಧ ಸಂಘಟನೆಗಳ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಸಣ್ಣನಿಂಗಪ್ಪ ಕೊಪ್ಪದ, ನಾಗಣ್ಣ ಒಡೆಯರ, ಮಹೇಶ ಬಣಕಾರ, ಮಹಾರುದ್ರಪ್ಪ ಕೂಸನೂರ, ರುದ್ರಪ್ಪ ಬಳಿಗಾರ, ಮಾಲತೇಶ ಪರಪ್ಪನವರ, ರಾಜಣ್ಣ ಪಟ್ಟಣದ, ಚನ್ನಬಸಪ್ಪ ಹಾವಣಗಿ, ಬಸವಂತಪ್ಪ ಮೆಳ್ಳಿಹಳ್ಳಿ ವೇದಿಕೆಯಲ್ಲಿದ್ದರು.