ಬಡವರಿಗಾಗಿ ನೀಡುವ ಪಡಿತರ ಮಾರಾಟ ಮಾಡಿದರೆ ಕ್ರಮ: ಚಂದ್ರಮ್ಮ

| Published : Mar 19 2025, 12:30 AM IST / Updated: Mar 19 2025, 12:31 AM IST

ಬಡವರಿಗಾಗಿ ನೀಡುವ ಪಡಿತರ ಮಾರಾಟ ಮಾಡಿದರೆ ಕ್ರಮ: ಚಂದ್ರಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಬಡವರಿಗಾಗಿ ಸೊಸೈಟಿ ಮೂಲಕ ನೀಡುತ್ತಿರುವ ಉಚಿತ ಅಕ್ಕಿಯನ್ನು ಮಾರಾಟ ಮಾಡಿದರೆ ಅಂತವರಿಗೆ ನೀಡುವ ಅಕ್ಕಿ ಯನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಎಚ್ಚರಿಕೆ ನೀಡಿದರು.

- ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಸ್ಠಾನ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಡವರಿಗಾಗಿ ಸೊಸೈಟಿ ಮೂಲಕ ನೀಡುತ್ತಿರುವ ಉಚಿತ ಅಕ್ಕಿಯನ್ನು ಮಾರಾಟ ಮಾಡಿದರೆ ಅಂತವರಿಗೆ ನೀಡುವ ಅಕ್ಕಿ ಯನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಎಚ್ಚರಿಕೆ ನೀಡಿದರು.

ಮಂಗಳವಾರ ತಾಪನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ತಿಂಗಳಿಂದ 5 ಕೆಜಿ ಅಕ್ಕಿ ಹಣದ ಬದಲಿಗೆ 5 ಕೆ.ಜಿ.ಅಕ್ಕಿಯನ್ನೇ ನೀಡುತ್ತಿದ್ದೇವೆ. ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳೂ ನೀಡಲಾಗುತ್ತಿದ್ದು ಫೆಬ್ರವರಿ, ಮಾರ್ಚ ತಿಂಗಳ ಅಕ್ಕಿ ಸೇರಿಸಿ ನೀಡಲಾಗುವುದು. ಈ ವಿಚಾರವನ್ನು ಎಲ್ಲಾ ಸೊಸೈಟಿಗಳ ಮುಂಭಾಗದಲ್ಲಿ ನಾಮಫಲಕ ಹಾಕಬೇಕು ಎಂದು ಸೂಚಿಸಿದರು.

ಸಮಿತಿ ಸದಸ್ಯ ರಘು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿ ಪವರ್ ಕಟ್ ಮಾಡುತ್ತಿದ್ದು ಮನಸೋ ಇಚ್ಚೆ ವಿದ್ಯುತ್ ನೀಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷಾ ಸಮಯವಾದ್ದರಿಂದ ಸಮಯಕ್ಕೆಸರಿಯಾಗಿ ವಿದ್ಯುತ್ ನೀಡಬೇಕು. ಯಾವುದೇ ಪವರ್ ಕಟ್ ಮಾಡಬಾರದು. ವಿದ್ಯುತ್ ಕಡಿತ ಮಾಡುವ ಸಮಯವನ್ನು ಮುಂಚಿತವಾಗಿ ಪತ್ರಿಕೆಗಳ ಮೂಲಕ ತಿಳಿಸಬೇಕು ಎಂದರು. ಸದಸ್ಯರಾದ ಬೇಸಿಲ್ ಮಾತನಾಡಿ, ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೂ ಸರಿಯಾಗಿ ಸೌಲಭ್ಯ ದೊರಕುತ್ತಿರುವುದು ಗೃಹ ಜ್ಯೋತಿ ಯೋಜನೆಯಿಂದ ಮಾತ್ರ. ಮೆಸ್ಕಾಂ ಇಲಾಖೆಯಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ, ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುವುದೇ ದೊಡ್ಡ ಸಮಸ್ಯೆ ಎಂದರು.

ಸೀನಿಯರ್ ಅಸಿಸ್ಟೆಂಟ್ ಪ್ರಶಾಂತ್ ಮಾತನಾಡಿ, ಮಧ್ಯಾಹ್ನದ ವೇಳೆ ಲೋಡ್ ಜಾಸ್ತಿ ಹಿನ್ನಲೆ ಲೋಡ್ ಶೆಡ್ಡಿಂಗ್ ಮಾಡ ಲಾಗುತ್ತಿದೆ. ಉಳಿದಂತೆ ಸಂಜೆ ವೇಳೆ, ರಾತ್ರಿ ವಿದ್ಯುತ್ ವ್ಯತ್ಯಯವಾಗುತ್ತಿಲ್ಲ ಎಂದು ತಿಳಿಸಿದರು. ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ ಬಸವರಾಜ್ ಮಾತನಾಡಿ, ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಫೆ.2025 ರವರೆಗೆ ಒಟ್ಟು ₹1,85,06,422 ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಇದುವರೆಗೆ ಒಟ್ಟು 63 ಕೋಟಿ 57 ಲಕ್ಷದ 69 ಸಾವಿರದ 957 ಆದಾಯವಾಗಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 3 ಕೋಟಿ 64 ಲಕ್ಷದ 99 ಸಾವಿರದ 530 ಪ್ರಯಾಣಿಕರು ಸಂಚರಿಸಿದ್ದು ಇದುವರೆಗೂ ಒಟ್ಟು 139 ಕೋಟಿ 65 ಲಕ್ಷದ 54 ಸಾವಿರದ 719 ರು. ಆದಾಯವಾಗಿದೆ. ದಿನೇ, ದಿನೇ ಮಹಿಳಾ ಪ್ರಯಾಣಿಕರ ಸಂಖ್ಯೆ ಜಾಸ್ತಿ ಆಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ ಎಂದರು. ಕೊರಲ ಕೊಪ್ಪದಿಂದ ಕುದುರಗುಂಡಿಯವರೆಗೂ ಎಲ್ಲಾ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆಯಾಗಬೇಕೆಂದು ಸಮಿತಿ ಸದಸ್ಯರು ಮನವಿ ಮಾಡಿದ್ದರು. ಅದರಂತೆ ಮೇಲಾಧಿಕಾರಿಗಳು ಅವರ ಮನವಿಗೆ ಸ್ಪಂದಿಸಿ ಕೊರಲಕೊಪ್ಪದಿಂದ ಕುದ್ರೇಗುಂಡಿಯವರೆಗಿನ ಎಲ್ಲಾ ಸ್ಟಾಪ್‌ಗಳಲ್ಲೂ ಬಸ್ಸುಗಳ ನಿಲುಗಡೆಗೆ ಆದೇಶಿಸಿದ್ದಾರೆ. ಅಲ್ಲದೆ ಉಡುಪಿ-ಬೀರೂರು ಬಸ್ಸಿಗೂ ಸ್ಟಾಪ್ ನೀಡಲು ಪ್ರಸ್ತಾವನೆ ಬಂದಿದೆ ಎಂದರು.

ಸಿಡಿಪಿಒ ಇಲಾಖೆ ತಾಲೂಕು ಸಂಯೋಜಕ ಪ್ರದೀಪ್ ಮಾಹಿತಿ ನೀಡಿ, ಒಟ್ಟು 19661 ಪಡಿತರ ಚೀಟಿಗಳಿದ್ದು ಅವುಗಳಲ್ಲಿ 16027 ನೋಂದಣಿ ಆಗಿವೆ. ಇದುವರೆಗೆ ಒಟ್ಟು 15,561 ಫಲಾನುಭವಿಗಳಿಗೆ ಅಕ್ಟೋಬರ್ 2025 ರವರೆಗೆ 3 ಕೋಟಿ 11 ಲಕ್ಷದ 22 ಸಾವಿರ ರು. ಸಂದಾಯವಾಗಿದೆ. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ಹಣವೂ ಸಂದಾಯವಾಗಿದೆ. ಇನ್ನೂ ಸಂಪೂರ್ಣ ಮಾಹಿತಿ ಅಪ್‌ಡೇಟ್ ಆಗಿಲ್ಲ. ಕೆಲವು ಅರ್ಜಿಗಳು ಮರಣ ಪ್ರಕರಣ ಹಾಗೂ ಜಿಎಸ್.ಟಿ, ಐಟಿ ರಿಟನ್ಸ್ ಎಂಬ ಕಾರಣದಿಂದ ತಿರಸ್ಕೃತಗೊಂಡಿವೆ. ಇನ್ನು ಕೆಲವು ಪಡಿತರ ಚೀಟಿ ಮುಖ್ಯಸ್ಥರ ಹೆಸರು ಬದಲಾವಣೆಯಿಂದ ತಿರಸ್ಕೃತಗೊಂಡಿವೆ ಎಂದು ಸಭೆಗೆ ತಿಳಿಸಿದರು.

ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಈ ಬಗ್ಗೆ ತಾಲೂಕು ಸಮಿತಿ ಅಧ್ಯಕ್ಷರು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುತ್ತಾರೆ. ಇಂತಹ ಸಮಸ್ಯೆಗಳಿರುವ ಫಲಾನುಭವಿಗಳ ಪಟ್ಟಿ ನೀಡಿ ಎಂದರು.

ಆಹಾರ ಇಲಾಖೆ ಅಧಿಕಾರಿ ಗಣಪತಿ ಸಭೆಯಲ್ಲಿ ಮಾಹಿತಿ ನೀಡಿ, ಜುಲೈ-2023ನಿಂದ ನವೆಂಬರ್ 2024 ರವರೆಗೆ ಒಟ್ಟು 11 ಕೋಟಿ 61 ಲಕ್ಷದ 2 ಸಾವಿರದ ಆರು ನೂರಾ ತೊಂಬತ್ತು ರು. ಡಿಬಿಟಿ ಹಣ ಜಮಾ ಆಗಿರುತ್ತದೆ ಎಂದರು. ಸದಸ್ಯರಾದ ರಘು, ನಿತ್ಯಾನಂದ,ನಾಗರಾಜ,ಹೂವಮ್ಮ,ಅಪೂರ್ವ ಇದ್ದರು.