ನಟಿ ಲೀಲಾವತಿ ಮನೆಗೆ ಅರ್ಜುನ್‌ ಸರ್ಜಾ ಭೇಟಿ

| Published : Nov 19 2023, 01:30 AM IST

ಸಾರಾಂಶ

ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಅವರ ನೆಲಮಂಗಲದ ಮನೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್‌ ಸರ್ಜಾ ಶನಿವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್‌ ಸರ್ಜಾ ಶನಿವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ನೆಲಮಂಗಲದ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಕೆಲ ಹೊತ್ತು ಲೀಲಾವತಿ ಅವರ ಮನೆಯಲ್ಲಿದ್ದು, ಪುತ್ರ ವಿನೋದ್‌ ಅವರ ಜತೆಗೂ ಮಾತುಕತೆ ನಡೆಸಿದರು. 87 ವರ್ಷದ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ.

+++ ಈ ಹಿನ್ನೆಲೆಯಲ್ಲಿ ಅನೇಕ ಕಲಾವಿದರು, ನಟ, ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ತಾಯಿಯ ಆರೋಗ್ಯ ವಿಚಾರಿಸುವಾಗ ಲೀಲಾವತಿ ಪುತ್ರ ವಿನೋದ್ ರಾಜ್ ಅವರು ಸರ್ಜಾ ಮುಂದೆ ಕಣ್ಣೀರಿಟ್ಟಿದ್ದಾರೆ.

ದೇವರಲ್ಲಿ ಪ್ರಾರ್ಥಿಸ್ತೇನೆ-ಸರ್ಜಾ: ಹಲವು ದಶಕಗಳ ಕಾಲ ತಮ್ಮ ನಟನೆ ಮೂಲಕ ಲೀಲಾವತಿ ಅವರು ಜನರ ಮನಗೆದ್ದಿದ್ದಾರೆ. ಅಲ್ಲದೆ ಪುತ್ರನ ಜೊತೆಗೂಡಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಬೇಗ ಸುಧಾರಣೆಯಾಗಲಿ ಎಂದು ಹನುಮಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

ತಾವು ಕಟ್ಟಿಸಿರುವ ಹನುಮಂತನ ದೇವಾಲಯದಲ್ಲಿ ಲೀಲಾವತಿ ಅವರಿಗಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಪೋಟೋ 5 : ನಟ ಅರ್ಜುನ್ ಸರ್ಜಾ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.