ಬಾಲ್ಯ ಜೀವನ ಸ್ಮರಿಸಿದ ನಟ ಗಣೇಶ್‌ರಾವ್ ಕೇಸರ್ಕರ್

| Published : Aug 18 2024, 01:47 AM IST

ಬಾಲ್ಯ ಜೀವನ ಸ್ಮರಿಸಿದ ನಟ ಗಣೇಶ್‌ರಾವ್ ಕೇಸರ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಹಂತದಲ್ಲಿ ಕಲಿತಿದ್ದು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರೀಡಾಪರಿಕರ, ಲೇಖನ ಸಾಮಗ್ರಿ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದು ನಟ ಗಣೇಶ್ ರಾವ್ ಕೇಸರ್ ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾನು ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಹಂತದಲ್ಲಿ ಕಲಿತಿದ್ದು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರೀಡಾಪರಿಕರ, ಲೇಖನ ಸಾಮಗ್ರಿ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದು ನಟ ಗಣೇಶ್ ರಾವ್ ಕೇಸರ್ ಕರ್ ಹೇಳಿದರು.

ಹೊಂಡರಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ರೀಡಾಪರಿಕರ, ಸಮವಸ್ತ್ರ ವಿತರಿಸಿ ಮಾತನಾಡಿ, ನಾನು ಪ್ರಾಥಮಿಕ ಶಿಕ್ಷಣವನ್ನು ಇಲ್ಲಿ, ಪ್ರೌಢ ಶಾಲಾ ಹಂತದ ವಿದ್ಯಾಭ್ಯಾಸವನ್ನು ಮಧುವನಹಳ್ಳಿ ಶಾಲೆಯಲ್ಲಿ ಕಲಿತೆ. ನಮ್ಮದು ರೈತ ಕುಟುಂಬವಾಗಿದ್ದು ಹೈನುಗಾರಿಕೆ, ವ್ಯವಸಾಯ ನಮ್ಮ ಕಸುಬಾಗಿತ್ತು. ಬಾಲ್ಯದ ಗೆಳೆಯ ಮಹದೇವನ ಜೊತೆ ಹಸುವಿಗಾಗಿ ಹುಲ್ಲುತರಲು ಶಾಲೆ ಬಿಟ್ಟ ಬಳಿಕ ಪೈಪೋಟಿ ನಡೆಸುತ್ತಿದ್ದೆ. ವೀರಪ್ಪ ಅವರು ಶಾಲೆಯಲ್ಲಿ ನೀಡುತ್ತಿದ್ದ ಗೋದಿ ಉಪ್ಪಿಟ್ಟು ತಿನ್ನಲು ಅನೇಕರು ಶಾಲೆಗೆ ಬರುತ್ತಿದ್ದರು, ನಾನು ಸಹಾ ಇಷ್ಟಪಟ್ಟು ಗೋದಿ ಉಪ್ಪಿಟ್ಟು ತಿನ್ನುತ್ತಿದ್ದೆ. ಅದು ಅಷ್ಟು ಸ್ವಾಧಿಷ್ಟವಾಗಿತ್ತು, ಮಧುವನಹಳ್ಳಿ ಶಾಲೆಯಲ್ಲಿ ತನಗೆ ನಾಟಕ, ಕಲೆ ಕಲಿಸಿದ ಗುರುಗಳನ್ನು ಸ್ಮರಿಸಿ ಅವರ ಸಹಕಾರದೊಂದಿಗೆ ಅಂತರ್ ಜಿಲ್ಲಾ ನಾಟಕ ಸ್ವರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ್ದೆ ಎಂದರು.

ವಿದ್ಯಾರ್ಥಿನಿ ಕೋರಿಕೆ ಮೇರೆಗೆ ಕ್ರೀಡಾಪರಿಕರ: ನಾನು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದುಕೊಂಡಿದ್ದೆ, ಈ ವೇಳೆ ಮುಖ್ಯಶಿಕ್ಷಕ ವಾಸು ಅವರು ನಮ್ಮ ಶಾಲೆಯ ಮಕ್ಕಳಿಗೆ ಕೊಡುಗೆ ನೀಡಿ ಎಂದು ಮನವಿ ಮಾಡಿದರು. ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶಿಲ್ಪ ಶಾಲೆ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಕೊಡಿಸಿ ಎಂದು ಕೇಳಿದ್ದಳು. ಈ ಹಿನ್ನೆಲೆ ನಾನು ಶಾಲಾ ಮಕ್ಕಳಿಗೆ ಅಗತ್ಯವಾದ ಸಮವಸ್ತ್ರ, ಕ್ರೀಡಾಸಾಮಗ್ರಿ, ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕ ವಿತರಿಸಿದ್ದೇನೆ. ಮುಂದಿನ ಸಾಲಿನಲ್ಲಿ ಶಿಕ್ಷಣ ಇಲಾಖೆ ಅನುಮತಿ ನೀಡಿದರೆ ಶಾಲೆ ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದರು.

ಅಂದು ಶಿಕ್ಷೆ ಮೂಲಕ ನೀಡುತ್ತಿದ್ದ ಶಿಕ್ಷಣ ಅತ್ಯಂತ ಗುಣಮಟ್ಟದಾಗಿತ್ತು, ಶಿಕ್ಷೆಯಿಂದಾಗಿ ಶಿಕ್ಷಣ ಕಲಿಯುತ್ತಿದ್ದ ಹಿಂದಿನ ತಮೆಮಾರಿನವರು ಸಾಕಷ್ಟು ಸಾಧನೆ ಮಾಡಿದ್ದಾರೆ, ಆದರೆ ಇಂದಿನ ದಿನಗಳಲ್ಲಿ ಸರ್ಕಾರವೆ ಮಕ್ಕಳಿಗೆ ಪೆಟ್ಟು ನೀಡದಂತೆ ಆದೇಶ ಹೊರಡಿಸಿದ್ದು ಈ ನೀತಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮುಖ್ಯಶಿಕ್ಷಕ ವಾಸು ಮಾತನಾಡಿ, ನಟ ಗಣೇಶ್‌ರಾವ್ ಅವರು ನಮ್ಮ ಶಾಲೆಗೆ ಬಂದು ಕ್ರೀಡಾಪರಿಕರ ಇನ್ನಿತರ ಸಾಮಗ್ರಿ ಕೊಡಿಸುವುದಾಗಿ ಹೇಳಿ ತೆರಳಿದ ಬಳಿಕ ಅನೇಕ ಧಾನಿಗಳು ಶಾಲೆಗೆ ಅಗತ್ಯ ಪರಿಕರ ಕೊಡಿಸಿದ್ದಾರೆ. ಚಿನ್ನರಾಜು ಮೈಕ್ ಸೆಟ್, ಲಯನ್ಸ್ ಸಂಸ್ಥೆ ಹಾಗೂ ಇನ್ನಿತರ ಧಾನಿಗಳು ನೋಟ್ ಬುಕ್ ಕೊಡಿಸಿದ್ದಾರೆ. ಮಲ್ಲೇಗೌಡರು ಕಂಪ್ಯೂಟರ್‌ಗಳನ್ನು ನೀಡಿದ್ದಾರೆ ಎಂದರು.

ಈ ವೇಳೆ ಶಂಖಿನ ಮಠಾಧ್ಯಕ್ಷ ನೀಲಕಂಠ ಶಿವಾಚಾರ್ಯ ಸ್ವಾಮಿಜಿ, ಬಿಇಒ ಮಂಜುಳ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಂಗಸ್ವಾಮಿ, ಮಹದೇವಕುಮಾರ್, ಗಣೇಶ್ ಅವರ ಅಳಿಯ ನ್ಯಾಷನಲ್‌ ಆಟಗಾರ ಕಾರ್ತಿಕ್ ಮಧು, ಪುತ್ರಿ ಮಧು, ತಾಯಿ ಸರಸುಬಾಯಿ, ಮಹದೇವಕುಮಾರ್, ಶಿಕ್ಷಣ ಸಂಯೊಜಕ ನಾಗರಾಜು, ಶರತ್ ಬಾಬು, ಬಸವರಾಜು, ಗ್ರಾಮದ ಹಿರಿಯ ಮುಖಂಡರಾದ ಗುರುಸ್ವಾಮಿ, ರಾಗಿಣಿ, ಚಿನ್ನರಾಜು, ಹರ್ಷ, ಮಲ್ಲಿಕಾರ್ಜುನಪ್ಪ, ಸಿದ್ದಲಿಂಗಸ್ವಾಮಿ, ರಮೇಶ ಮಲ್ಲೆಗೌಡ, ಅರಸಶೆಟ್ಟಿ ಗಿರಿಗೌಡ ಶಿವಪ್ಪಗೌಡ, ಮತೀನ್, ಮಾದೇಶ ಇದ್ದರು.

ಗಣೇಶ್ ರಾವ್ ಅವರು ತಾವು ಓದಿದ ಶಾಲೆಗೆ ಕೊಡುಗೆ ನೀಡಿ, ಶಾಲೆ ದತ್ತು ಪಡೆಯಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಈ ಸಂಬಂದ ಹಿರಿಯ ಅಧಿಕಾರಿಗಳಿಗೆ ಈ ವಿಚಾರ ತಿಳಿಸುವೆ. ಹಿರಿಯ ವಿದ್ಯಾರ್ಥಿ ವೇದಿಕೆ ಮೂಲಕ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮದಡಿ ಶಾಲೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುವುದು.

ಮಂಜುಳ, ಬಿಇಒ ಕೊಳ್ಳೇಗಾಲ