ನಟ ಪುನೀತ್ ರಾಜ್‌ಕುಮಾರ್ ಸರಳ ಸಜ್ಜನ ವ್ಯಕ್ತಿ: ಸಚಿವ ಜಾರ್ಜ್

| Published : Mar 05 2024, 01:34 AM IST

ಸಾರಾಂಶ

ದೇವರಲ್ಲಿ ಭಯ, ಭಕ್ತಿ ಇರುವುದರಿಂದ ಸಮಾಜದಲ್ಲಿ ಎಲ್ಲಾ ಸಮುದಾಯದ ಜನ ಅವರ ನಂಬಿಕೆಯಂತೆ ವಿವಿಧ ಬಗೆಯಲ್ಲಿ ದೇವರ ಪೂಜೆ ಮಾಡುತ್ತಿರುವುದು ದೇವನೊಬ್ಬ ನಾಮ ಹಲವು ಎಂಬುವುದಕ್ಕೆ ಪೂರಕ ಹಾಗೂ ಪ್ರೇರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಭಿಪ್ರಾಯಪಟ್ಟರು.

- ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಟಾಪಿಸಿವ ಡಾ. ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಅನಾವರಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇವರಲ್ಲಿ ಭಯ, ಭಕ್ತಿ ಇರುವುದರಿಂದ ಸಮಾಜದಲ್ಲಿ ಎಲ್ಲಾ ಸಮುದಾಯದ ಜನ ಅವರ ನಂಬಿಕೆಯಂತೆ ವಿವಿಧ ಬಗೆಯಲ್ಲಿ ದೇವರ ಪೂಜೆ ಮಾಡುತ್ತಿರುವುದು ದೇವನೊಬ್ಬ ನಾಮ ಹಲವು ಎಂಬುವುದಕ್ಕೆ ಪೂರಕ ಹಾಗೂ ಪ್ರೇರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಭಿಪ್ರಾಯಪಟ್ಟರು.ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ನಟ ಪುನೀತ್ ರಾಜ್‌ಕುಮಾರ್ ಸರಳ, ಸಜ್ಜನ ವ್ಯಕ್ತಿಯಾಗಿದ್ದವರು. ಅತ್ಯಂತ ವಿನಯ ಹಾಗೂ ಸಂಯಮದಿಂದ ಎಲ್ಲರೊಂದಿಗೆ ಮಾತನಾಡುವ ಸೌಜನ್ಯ ಮೈಗೂಡಿಸಿಕೊಂಡಿದ್ದರು. ಜೊತೆಗೆ ನನ್ನ ಪುತ್ರನ ಆಪ್ತ ಸ್ನೇಹಿತನಾಗಿದ್ದರು ಎಂದು ಹೇಳಿದರು. ಈ ಭಾಗದಲ್ಲಿ ಕಾಫಿ ತೋಟ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಇಲ್ಲಿಗೆ ಬರಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಅಗಲಿಕೆ ಇಡೀ ದೇಶ, ರಾಜ್ಯ, ವಿದೇಶಗಳಿಗೆ ತುಂಬಲಾರದ ನಷ್ಟ ಎಂದು ಹೇಳಿದರು. ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲಾ ರೀತಿ ಹೋರಾಟಕ್ಕೆ ಬದ್ಧವಾಗಿದ್ದೇನೆ, ಎಲ್ಲರ ಸಹಕಾರದೊಂದಿಗೆ ಜಿಲ್ಲೆ ಹಾಗೂ ಗಾಳಿಗುಡ್ಡೆ ಶಿರವಾಸೆ ಎಲ್ಲವನ್ನು ಅಭಿವೃದ್ಧಿ ಮಾಡೋಣ, ಗಾಳಿಗುಡ್ಡೆ ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಲು ಶ್ರಮಿಸುವ ಭರವಸೆ ನೀಡಿದರು. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಗೆ ಹಾಗೂ ದೇವರ ಕಾರ್ಯಗಳಿಗೆ ನಾನು ಸದಾ ಸಿದ್ಧ. ನಿಮ್ಮೆಲ್ಲರ ಸಹಕಾರ ಕಾಂಗ್ರೆಸ್ ಮುಖಂಡರ ಆಶೀರ್ವಾದದ ಫಲವಾಗಿ ಇಂದು ನಿಮ್ಮ ಮುಂದೆ ಸಚಿವನಾಗಿ ಇದ್ದೇನೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ಹೋರಾಟ ಮಾಡಬೇಕಾದ ದುರದೃಷ್ಟಕರ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಕುಟುಂಬದವರು ಪುನೀತ್ ರಾಜ್‌ಕುಮಾರ್ ಪುತ್ಥಳಿ ನಿರ್ಮಾಣ ಹಾಗೂ ಪುರಾತನ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿರುವುದಕ್ಕೆ ಅಭಿನಂದಿಸಿದರು. ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಸಾಧನೆ ಮಾಡಿ ರಾಜ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ಕೊಟ್ಟು ದೇಶ-ವಿದೇಶಗಳಲ್ಲಿ ನಟನೆ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಘಿಸಿದರು. ಕೆ.ವಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಶಿರವಾಸೆ ಗ್ರಾಪಂ ಅಧ್ಯಕ್ಷ ರಘುನಾಥ್, ಕೆ.ಆರ್ ಚಂದ್ರೇಗೌಡ, ಬಿಸಿಲೇಹಳ್ಳಿ ಸೋಮಶೇಖರ್, ಪಿ.ವಿ. ಲೋಕೇಶ್, ರೇಣುಕಾರಾಧ್ಯ, ಪ್ರಕಾಶ್, ಕೆ.ಆರ್ ಅನಿಲ್ ಕುಮಾರ್, ವಾಸು ಪೂಜಾರಿ, ಜಾರ್ಜ್ ಆಸ್ಟಿನ್, ಜೆ.ಸಿ.ಲಕ್ಷ್ಮಣ, ಗಾಳಿಗುಡ್ಡೆ ಯೋಗೀಶ್, ನಂಜೇಶ್, ಪ್ರೇಮ, ಜೆಸೆಂತ ಉಪಸ್ಥಿತರಿದ್ದರು. 4 ಕೆಸಿಕೆಎಂ 1

ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಲೋಕಾರ್ಪಣೆ ಮಾಡಿದರು. ಶಾಸಕರಾದ ಎಚ್‌.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ ಇದ್ದರು.