ತಾಲೂಕಿನ ಸಂದನಪಾಳ್ಯ ಗ್ರಾಮದ ಸಂತ ಆಂತೋಣಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ತಾಲೂಕು ಆಡಳಿತ, ಗ್ರಾ.ಪಂನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಸಂದನಪಾಳ್ಯ ಗ್ರಾಮದ ಸಂತ ಆಂತೋಣಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ತಾಲೂಕು ಆಡಳಿತ, ಗ್ರಾ.ಪಂನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಕುರಿತು ಮಾತನಾಡಿದ ಅವರು, ಶಾಲಾ ಆಡಳಿತ ಮಂಡಳಿ ಒಂದು ತಿಂಗಳ ಹಿಂದೆಯೇ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ನೀಡಿತ್ತು. ಆದರೆ ಅಧಿಕಾರಿಗಳು ಸ್ಪಂದಿಸಿಲ್ಲ . ಅನಿವಾರ್ಯವಾಗಿ ಶಾಲೆಯೇ ಹಣ ಹೊಂದಿಸಿ ಟ್ಯಾಂಕರ್ ಮೂಲಕ ನೀರು ಖರೀದಿಸಿ ಹಲವು ದಿನ ತಳ್ಳಿದೆ. ಅನುದಾನದ ಕೊರತೆಯಿಂದ ಅದು ಸಾಧ್ಯವಾಗದೆ ಕೊನೆಗೆ ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರತಿಭಟನೆಯ ಅಸ್ತ್ರ ಹಿಡಿಯುವಂತಾಗಿದೆ.
ಬಿಸಿಲಿನಲ್ಲಿ ಮಕ್ಕಳು ನೀರಿಲ್ಲದೆ ಪರದಾಡುತ್ತಿದ್ದರೆ, ಸಂಬಂಧಪಟ್ಟ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿರುವುದು ಖಂಡನೀಯ. ಸಮಸ್ಯೆ ಬಗೆಹರಿಸಬೇಕಾದ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಪ್ರತಿಭಟನೆ ಅನಿವಾರ್ಯವಾಯಿತು. ಆದರೆ ಪ್ರತಿಭಟನೆ ನಡೆಸಿದ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ತಪ್ಪು ಮಾಡಿದವರನ್ನು ಬಿಟ್ಟು, ತೊಂದರೆ ಅನುಭವಿಸಿದವರಿಗೆ ಶಿಕ್ಷೆ ನೀಡುವುದು ನ್ಯಾಯವೇ? ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಪರಮಾವಧಿ ಎಂದು ಕಿಡಿಕಾರಿದರು.ಕೂಡಲೇ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತ ಎಚ್ಚೆತ್ತು ಶಾಲೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಶಿಕ್ಷಣ ಇಲಾಖೆ ನೀಡಿರುವ ನೋಟಿಸ್ ಅನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಪೋಷಕರೊಂದಿಗೆ ಸೇರಿ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.