ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಅಯೋಧ್ಯೆ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಅರ್ಪಣೆ ಮಾಡಲು ಸ್ಥಳೀಯ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶನಿವಾರ ಪಟ್ಟಣದಿಂದ ಅಡಕೆ ಹಿಂಗಾರವನ್ನು ಕೊಂಡೊಯ್ದು ಆಯೋಧ್ಯೆ ಯಾತ್ರೆ ಕೈಗೊಂಡರು.ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಹಿಂಪ ಕಾರ್ಯಕರ್ತರು ಐದು ಅಡಕೆ ಹಿಂಗಾರವನ್ನು ಅರ್ಚಕರಿಂದ ಪಡೆದುಕೊಂಡರು.
ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಈ ಕುರಿತು ಮಾಹಿತಿ ನೀಡಿ, ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯಾದ ನಂತರ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರಸೇವಕರು, ವಿಹಿಂಪ ಕಾರ್ಯಕರ್ತರಿಗೆ ಆಯೋಧ್ಯೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆಯಿಂದ 75 ಜನ ಕಾರ್ಯಕರ್ತರಿಗೆ ಪಾಸ್ ವ್ಯವಸ್ಥೆ ಲಭ್ಯವಾಗಿದ್ದು, ರೈಲು ಮೂಲಕ ಎಲ್ಲರೂ ಒಗ್ಗೂಡಿ ತೆರಳಿ ಬಾಲರಾಮನ ದರ್ಶನ ಮಾಡಲಿದ್ದೇವೆ. ದರ್ಶನದ ಸಂದರ್ಭದಲ್ಲಿ ಲೋಕಕಲ್ಯಾಣದ ಚಿಂತನೆ ಹೊಂದಿ, ಪ್ರಾರ್ಥನೆ ಸಲ್ಲಿಸುವ ನಿರ್ಧಾರ ಸ್ಥಳೀಯ ಕಾರ್ಯಕರ್ತರು ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ, ರೈತರ ಜೀವನಾಡಿಯಾದ ಅಡಕೆ ಬೆಳೆಗೆ ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ ತಗುಲಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರೊಂದಿಗೆ ಮಲೆನಾಡು ಭಾಗದಲ್ಲಿ ಬಫರ್ ಜೋನ್, ಕಸ್ತೂರಿ ರಂಗನ್ ಯೋಜನೆ, ಮೀಸಲು ಅರಣ್ಯದ ಸಮಸ್ಯೆಗಳು ರೈತರ ನೆತ್ತಿಯ ಮೇಲೆ ತೂಗುಗತ್ತಿಯಾಗಿದೆ.ಈ ಸಮಸ್ಯೆಗಳನ್ನು ಬಾಲರಾಮನು ನಿವಾರಿಸುವನು ಎಂಬುದು ನಮ್ಮ ಬಲವಾದ ನಂಬಿಕೆಯಾಗಿದ್ದು, ಈ ಹಿನ್ನೆಲೆ ಅಯೋಧ್ಯೆ ಯಾತ್ರೆಗೆ ತೆರಳುತ್ತಿರುವ ಸ್ಥಳೀಯ ಕಾರ್ಯಕರ್ತರು ರೈತರಿಂದ ಅಡಕೆ ಹಿಂಗಾರ ಸಂಗ್ರಹ ಮಾಡಿ ಕೊಂಡೊಯ್ಯುತ್ತಿದ್ದೇವೆ. ಇದರೊಂದಿಗೆ ಮಲೆನಾಡಿನ ಅಡಕೆ, ಕಾಫಿ, ಭತ್ತ ಸಹ ತೆಗೆದುಕೊಂಡು ಹೋಗಲಾಗುತ್ತಿದೆ.
ಹಿಂಗಾರ, ಅಡಕೆ, ಕಾಫಿ, ಭತ್ತವನ್ನು ಬಾಲರಾಮನ ಪಾದಗಳಿಗೆ ಸಮರ್ಪಣೆ ಮಾಡಿ ಮಲೆನಾಡಿನ ಸಮಸ್ಯೆಗಳು ನಿವಾರಣೆಯಾಗಿ, ದೇಶದ ಬೆನ್ನೆಲುಬಾದ ರೈತರಿಗೆ ಸುಖ ಜೀವನ ಪ್ರಾಪ್ತವಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದರು.ರಾಮಲಲ್ಲಾ ವಿಗ್ರಹಕ್ಕೆ ಈಗಾಗಲೇ ಹಲವು ಬಗೆ ಅಲಂಕಾರಗಳು ನೆರವೇರಿದ್ದು, ಫೆ.೧೯ರ ಸೋಮವಾರ ಮಲೆನಾಡಿನ ಅಡಕೆ ಹಿಂಗಾರದ ಅಲಂಕಾರವನ್ನು ಮಾಡುವ ವ್ಯವಸ್ಥೆಯಾಗಿದೆ. ಇದಕ್ಕೆ ಈಗಾಗಲೇ ಸಂಘದ ಹಿರಿಯರು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೊಂದಿಗೆ ಮಾತುಕಥೆ ನಡೆಸಿ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರೊಂದಿಗೆ ಟ್ರಸ್ಟ್‌ಗೆ ಭಿನ್ನಹ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ಮಾತನಾಡಿ, ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ದರ್ಶನಕ್ಕೆ ತೆರಳುತ್ತಿರುವ ಸಂಘಟನೆ ಕಾರ್ಯಕರ್ತರು ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಸಂಕಲ್ಪ ಹೊಂದಿ ತೆರಳುತ್ತಿರುವುದು ಶ್ಲಾಘನೀಯವಾಗಿದೆ. ಅಡಕೆ ಹಿಂಗಾರ ಕೊಂಡೊಯ್ದು ಶ್ರೀರಾಮನಿಗೆ ಅರ್ಪಣೆ ಮಾಡುತ್ತಿರುವುದು ಸಹ ವಿಶೇಷವಾಗಿದ್ದು, ಕಾರ್ಯಕರ್ತರ ಪ್ರಾರ್ಥನೆ ಫಲವಾಗಿ ಕೃಷಿ ಸಂಬಂಧಿತ ಸಕಲ ರೋಗಬಾಧೆಗಳು ನಿವೃತ್ತಿಯಾಗಲಿ ಎಂದು ಹಾರೈಸಿದರು.ಸಂಘಟನೆ ಪ್ರಮುಖರಾದ ಮಹೇಶ್ಚಂದ್ರ, ಬಿ.ವೆಂಕಟೇಶ್, ರತ್ನಾಕರ ಗಡಿಗೇಶ್ವರ, ಗುರುಪ್ರಸಾದ್, ಉಮೇಶ್, ಅರುಣ್‌ಕುಮಾರ್, ರವೀಂದ್ರ ಆಚಾರ್ಯ, ಅಜಿತ್ ಕಳಸ, ಪ್ರೇಮಲತಾ, ಮಂಜು ಹಲಸೂರು, ಸಂದೀಪ್‌ಶೆಟ್ಟಿ, ಶರತ್‌ಪೂಜಾರಿ, ಭೂಮಿಕಾ ಆರ್.ಆಚಾರ್ಯ, ಸಾಮ್ರಾಟ್, ನಾರಾಯಣ್, ಅಶೋಕ್ ಮತ್ತಿತರರು ಹಾಜರಿದ್ದರು.