ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಿಕೆ ಎಲ್ಲಿಯೂ ನಿಲ್ಲದೆ ಮತ್ತಷ್ಟು ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕು ಎಂದು ಸಂಗೀತ ವಿದ್ವಾಂಸ ವಿದ್ಯಾಭೂಷಣ ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ್ ತೋಳ್ಪಾಡಿ ಅವರಿಗೆ ‘ರಂಗ ಚಂದಿರ’ ಸಂಘಟನೆಯಿಂದ ಶನಿವಾರ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪಸ್ಸು ಎಂದರೆ ಹಿಮಾಲಯಕ್ಕೆ ಹೋಗುವುದಲ್ಲ. ಸ್ವಾಧ್ಯಾಯ ಎನ್ನುವುದು ಪರಿಪೂರ್ಣ ಜ್ಞಾನದ ದಾರಿಯಲ್ಲಿ ಅತ್ಯಂತ ಅವಶ್ಯಕ. ಹೀಗಾಗಿ ಜ್ಞಾನಾರ್ಜನೆಯಿಂದ ವಿಮುಖರಾಗಬಾರದು ಎಂದು ಹೇಳಿದರು.
ಲಕ್ಷ್ಮೀಶ ತೋಳ್ಪಾಡಿಯವರ ಉಪನ್ಯಾಸ ನಾಡಿನಾದ್ಯಂತ ಜನಪ್ರಿಯವಾಗಿವೆ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿರುವುದು ಎಲ್ಲ ವಿದ್ವಾಂಸರಿಗೆ ದೊರೆತ ಮನ್ನಣೆ ಎಂದರು.ಬಳಿಕ ‘ಮಹಾಭಾರತದಲ್ಲಿ ಮಾತು ಮತ್ತು ಮೌನ’ ವಿಚಾರ ಕುರಿತು ಉಪನ್ಯಾಸ ನೀಡಿದ ಲಕ್ಷ್ಮೀಶ ತೋಳ್ಪಾಡಿ, ಮಹಾಭಾರತ ಮಹಾನ್ ಸಾಹಸ ಹಾಗೂ ಹತಾಶೆಯ ಕತೆ. ಕೃತಿ ಬರೆದಾದ ಬಳಿಕ ನಿರಾಳತೆ ಮೂಡುತ್ತದೆ. ಆದರೆ, ವೇದವ್ಯಾಸರಿಗೆ ಮಹಾಭಾರತ ಬರೆದಾದ ಬಳಿಕ ಖಿನ್ನತೆ ಕಾಡಿತ್ತು ಎಂದು ಹೇಳಿಕೊಂಡಿದ್ದಾರೆ. ಮಹಾಭಾರತವನ್ನು ಜನ ಓದಬೇಕಾದ ರೀತಿಯಲ್ಲಿ ಓದಿಲ್ಲ ಎಂದು ಅವರು ಹೇಳಿದ್ದು ಗಮನಾರ್ಹ ಎಂದರು.
ಕಾಲಪ್ರವಾಹ ತೋರಿಸುವ ಮಹಾಕಾವ್ಯವಾದ ಮಹಾಭಾರತದಲ್ಲಿ ಒಂದರ ನಂತರ ಮತ್ತೊಂದು ಅಲೆ, ಭಾವನೆಗಳು ಮೂಡುತ್ತದೆ. ಹಲವಾರು ವಿಲಕ್ಷಣತೆಯಿಂದ ಕೂಡಿದ ಈ ಕಾವ್ಯ ನಮ್ಮ ಯೋಚನಾ ಲಹರಿಯನ್ನೇ ಪ್ರಶ್ನಿಸುತ್ತದೆ ಎಂದು ಹೇಳಿದರು.‘ಪ್ರಜಾವಾಣಿ’ ಸಂಪಾದಕ ರವೀಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿದರು.