ಅಚ್ಚಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿ

| Published : Nov 06 2024, 12:38 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 4 ದಿನದ ಕಾರ್ಯಕ್ರಮವನ್ನು ತಮಟೆ ಹೊಡೆಯುವ ಮೂಲಕ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಾಜನ್ ಆಯೋಗದ ವರದಿಯಂತೆ ಅಚ್ಚಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 4 ದಿನದ ಕಾರ್ಯಕ್ರಮವನ್ನು ತಮಟೆ ಹೊಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಗಡಿಭಾಗದ ಅಚ್ಚಕನ್ನಡಿಗರು ಇರುವ ತಾಳವಾಡಿ, ಕೊಲ್ಲಾಪುರ, ಕಾಸರಗೂಡು ಇವೆಲ್ಲವೂ ಕರ್ನಾಟಕದ ಅಂಗಗಳಾಗಿದ್ದು, ಬೇರೆಬೇರೆ ಭಾಷೆಗಳಿಗೆ ಸೇರಿ ತೊಂದರೆ ಅನುಭವಿಸುತ್ತಿರುವುದನ್ನು ಕಾಣಬಹುದಾಗಿದೆ. ಅವರು ಅನೇಕ ತೊಂದರೆಗಳನ್ನು ಅನುಭವಿಸುವುದನ್ನು ಪತ್ರಿಕೆ, ಟಿವಿಗಳಲ್ಲಿ ಕಾಣಬಹುದು.

ರಾಜ್ಯ ಸರ್ಕಾರ ರಾಜ್ಯದ ಗಡಿ ವಿವಾದ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ ಮಹಾಜನ್ ಆಯೋಗದ ವರದಿ ಜಾರಿಗೆ ತರುವ ಮೂಲಕ ಅಚ್ಚಕನ್ನಡಿಗರು ಇರುವ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕನ್ನಡ ಚಳವಳಿಗಾರ ವಾಟಾಳ್‌ ನಾಗರಾಜ್ ಅವರು ಕನ್ನಡ ಪರವಾಗಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ 50 ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಬೆಳವಣಿಗೆಗೆ, ರಕ್ಷಣೆಗೆಗೆ ಪೂರಕವಾಗಿದೆ ಎಂದರು.

ತಮಿಳು ಸಂಘದ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿರುವ ತಮಿಳು ಕೂಡ ಕನ್ನಡ ಪರ ಇರುತ್ತವೆ. ಕನ್ನಡ ಪರ ಹೋರಾಟದಲ್ಲಿ ಭಾಗಿಯಾಗುತ್ತೇನೆ. ತಮಿಳು ಸಂಘದಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದರು. ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಬರಹಗಾರ ಲಕ್ಷ್ಮೀನರಸಿಂಹ, ಶಾ.ಮುರಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾ.ಮುರಳಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ, ತಮಿಳು ಸಂಘದ ಜಗದೀಶ್, ಪಣ್ಯದಹುಂಡಿ ರಾಜು, ತಾಂಡವಮೂರ್ತಿ, ಮಹೇಶ್ ಗೌಡ, ವೀರಭದ್ರ, ನಿಜಧ್ವನಿ ಗೋವಿಂದರಾಜು,, ಚಾ.ವೆಂ.ರಾಜ್ ಗೋಪಾಲ್, ಮಂಜು, ಶಿವಲಿಂಗಮೂರ್ತಿ, ವೇಣುಗೋಪಾಲ್, ಮುತ್ತುರಾಜು, ನಂಜುಂಡಶೆಟ್ಟಿ, ಆರಾಧ್ಯ, ಆಟೋಲಿಂಗರಾಜು, ಚಾ.ಸಿ.ಸಿದ್ದರಾಜು, ಪ್ರಕಾಶ್ ಇತರರು ಹಾಜರಿದ್ದರು.