ಮಡಿವಾಳ ಜನಾಂಗವನ್ನು ಎಸ್ಸಿ ಪಟ್ಟಿಗೆ ಸೇರಿಸಲಿ

| Published : Sep 03 2024, 01:42 AM IST

ಸಾರಾಂಶ

ಸಂಪರ್ಕ ಸಂವಹನದ ಕ್ರಾಂತಿಯ ಫಲದಿಂದ ಹಿಂದುಳಿದ ಸಮಾಜದ ಅಭಿವೃದ್ಧಿಯ ಹಾದಿ ಸುಗಮವಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಮಡಿವಾಳ ಸಮುದಾಯವು ಎಲ್ಲರಂತೆ ಮುಂಚೂಣಿಗೆ ಬರಲು ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಡಿವಾಳ ಸಮುದಾಯವು ಹಿಂದುಳಿದಿದ್ದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಮಾಜ ಯಾವ ದೃಷ್ಟಿಕೋನದಿಂದ ನೋಡಿದರೂ ಮುಂದುವರಿದಿಲ್ಲ. ಸಮಾಜ ಮುಖ್ಯವಾಹಿಗೆ ಸೇರಲು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಉಪನಿರ್ದೇಶಕ ಸಿ.ವಿ. ವೆಂಕಟೇಶ್ ಹೇಳಿದರು.

ಪಟ್ಟಣದ ಕನಕ ಭನವದಲ್ಲಿ ತಾಲೂಕು ಮಡಿವಾಳ ನೌಕರರ ಬಳಗದ ವತಿಯಿಂದ ನಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅ‍ವರು, ಸಂಪರ್ಕ ಸಂವಹನದ ಕ್ರಾಂತಿಯ ಫಲದಿಂದ ಹಿಂದುಳಿದ ಸಮಾಜದ ಅಭಿವೃದ್ಧಿಯ ಹಾದಿ ಸುಗಮವಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೆಟ್ಟ ಮನಸ್ಸು ತೊಳೆಯುವ ಕೆಲಸ

ನಿವೃತ್ತ ಎಇಇ ಜಿ.ನಾರಾಯಣಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ, ಮೈಲಿಗೆಯನ್ನು ಮಡಿ ಮಾಡುವಂತಹ ವೃತ್ತಿಯಲ್ಲಿ ಜನಿಸಿ ತಳ ಸಮುದಾಯದ ಒಬ್ಬ ವ್ಯಕ್ತಿ 12 ನೇ ಶತಮಾನದಲ್ಲಿನ ಸಮಾಜದಲ್ಲಿದ್ದ ಕೆಲವು ಕೆಟ್ಟ ಮನಸ್ಥಿತಿಗಳ ಮನಸ್ಸುಗಳನ್ನು ತೊಳೆಯುವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆಂದು ಹೇಳಿದರು.

ಸಮಾಜವನ್ನು ಸರಿದಾರಿಯಲ್ಲಿ ತರಬೇಕೆಂಬ ಆಶಯದಂತೆ ಎಲ್ಲಾ ಸಮುದಾಯವನ್ನು ಸಮಾನವಾಗಿ ಒಗ್ಗೂಡಿಸಿಕೊಂಡು ಹೋಗಬೇಕೆಂದು ಬಸವಣ್ಣನವರ ಆಶಯದಂತೆ ಮಾಚಿದೇವರು ಸಹ ಶ್ರಮಪಟ್ಟರು. ಇಂತಹ ಸಮುದಾಯದಲ್ಲಿ ಹುಟ್ಟಿದ ನಾವು ಯಾವುದಕ್ಕೂ ಅಂಜದೆ ಕೆಳಗುಂದದೆ ವಿದ್ಯಾಭ್ಯಾಸದಲ್ಲಿ ಎಲ್ಲರಂತೆ ನಾವು ಸಹ ಮುಂಚೂಣಿಯಲ್ಲಿರಬೇಕು, ಸರ್ಕಾರದ ಉನ್ನತ ಉದ್ಯೋಗಗಳನ್ನು ಅಲಂಕರಿಸಿ ಸಮಾಜದಲ್ಲಿ ಸೇವೆ ಸಲ್ಲಿಸಬೇಕು ಎಂದರು.

ಉನ್ನತ ಹುದ್ದೆ ಅಲಂಕರಿಸಿ

ಜನಾಂಗದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್, ನ್ಯಾಯಾಧೀಶರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿ ನಮ್ಮ ಮಡಿವಾಳ ಸಮುದಾಯದ ಘನತೆಯನ್ನು ಎತ್ತಿ ಹಿಡಿಯಬೇಕು, ಆಗ ಮಾತ್ರ ನಮ್ಮ ಸಮುದಾಯಕ್ಕೆ ಸಮಾಜದಲ್ಲಿ ಒಳ್ಳೆಯ ಹಿಡಿತ ಸಿಗಲಿದೆ, ಈಗಿನ ವಿದ್ಯಾರ್ಥಿಗಳು ಮೊಬೈಲ್ ಚಟಕ್ಕೆ ಬಿದ್ದು ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ ಈ ಕೆಟ್ಟ ಪದ್ಧತಿಗೆ ತಿಲಾಂಜಲಿ ನೀಡಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರಾದ ರಂಗನಾಥ್, ಕೋಲಾರ ಮಡಿವಾಳ ನೌಕರರ ಬಳಗದ ಅಧ್ಯಕ್ಷರಾದ ಮಂಜುನಾಥ್, ಖಜಾಂಚಿ, ಅಮರನಾಥ್, ಉಪನೋಂದಣಾಧಿಕಾರಿ ರಾಮಾಂಜಿ, ಪರವನಹಳ್ಳಿ ವೆಂಕಟೇಶ್, ಶಿಕ್ಷಕರಾದ ಶ್ಯಾಮಮೂರ್ತಿ, ವೆಂಕಟಪ್ಪ, ಕೃಷ್ಣಪ್ಪ, ನಂಜುಂಡಪ್ಪ, ವೆಂಕಟರಾಮ್, ಸೀತಾರಾಮ್, ಮಂಜುನಾಥ್, ಆನಂದ್, ಮುರಳಿ, ಶಿಕ್ಷಕಿಯರಾದ ಲಕ್ಷ್ಮಮ್ಮ, ರಾಧಮ್ಮ, ಜಯಪದ್ಮ, ಶೋಭಾ ಇದ್ದರು.