ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಎರಡುವರೆ ವರ್ಷದ ಪುಟ್ಟ ಪೋರನೊಬ್ಬ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದಾಗಿ ೨೦೨೪ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡು ಅಪೂರ್ವ ಸಾಧನೆ ಮಾಡಿದ್ದಾನೆ.
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಎರಡುವರೆ ವರ್ಷದ ಪುಟ್ಟ ಪೋರನೊಬ್ಬ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದಾಗಿ ೨೦೨೪ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡು ಅಪೂರ್ವ ಸಾಧನೆ ಮಾಡಿದ್ದಾನೆ.
ತೇರದಾಳದ ಡಾ.ವಿನಾಯಕ ಮಾಳಿ ಅವರ ಪುತ್ರ ಅರ್ನವ ಸುಮಾರು ೨೬೦ಕ್ಕೂ ಹೆಚ್ಚು ವಸ್ತು, ಆಕೃತಿಗಳನ್ನು ಗುರುತಿಸಿ ಅವುಗಳ ಹೆಸರು ಹೇಳುತ್ತಾನೆ. ೨೦ ದಿನಗಳ ಹಿಂದೆ ಅರ್ನವ ತಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಗ್ಗೆ ತಿಳಿದುಕೊಂಡು ಮಗನ ಪ್ರತಿಭೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದು ಕಳುಹಿಸಿದ್ದು, ಆಯ್ಕೆ ಮಾಡಿ ಸರ್ಟಿಫಿಕೇಟ್ ಕಳುಹಿಸುವ ಮೂಲಕ ೨೦೨೪ರ ರೆಕಾರ್ಡ್ ಬುಕ್‌ನಲ್ಲಿ ದಾಖಲಾಗಿದ್ದಾನೆ. ಅರ್ನವ ಮೂಡಿ ಬಂದ ವಿಡಿಯೋದಲ್ಲಿ ೫ ಔಷಧಿಗಳು, ೨೪ ಉದ್ಯೋಗಗಳು, ೧೭ ಆಕೃತಿಗಳು, ೧೨ ಹಕ್ಕಿಗಳು, ೨೫ ತರದ ಚಟುವಟಿಕೆಗಳು, ೨೨ ಪ್ರಾಣಿಗಳು, ೨೬ ಹಣ್ಣುಗಳು, ೨೨ ಸ್ವಾತಂತ್ರ್ಯ ಹೋರಾಟಗಾರರು, ೨೪ ವಾಹನಗಳು, ೨೫ ತರಕಾರಿಗಳು, ೧ ರಿಂದ ೧೦ರವರೆಗೆ ಸಂಖ್ಯೆಗಳು, ೧೩ ದೇಹದ ಭಾಗಗಳನ್ನು, ೧೯ ರಾಷ್ಟ್ರದ ಧ್ವಜಗಳ ಹೆಸರು ಗುರುತಿಸಿ, ಅವುಗಳ ಹೆಸರು ಹೇಳುವುದರೊಂದಿಗೆ ಪದಬಂಧ ಬಿಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಸೆರೆ ಹಿಡಿದು ಕಳುಹಿಸಲಾಗಿತ್ತು. ಆಯ್ಕೆ ಸಮಿತಿಯವರಿಗೆ ಅನುಮಾನ ಬಂದರೆ ಅದನ್ನು ತಿರಸ್ಕರಿಸಬಹುದು, ಇಲ್ಲವೆ, ಬೇರೆ ವಿಡಿಯೋ ಮಾಡಿ ಕಳುಹಿಸುವಂತೆಯೂ ಕೇಳಬಹುದು. ಹಾಗಾಗಿ ಮೊದಲು ನಾವು ಅದರ ಕುರಿತಾಗಿ ಪೂರ್ಣ ತಿಳಿದುಕೊಂಡು ನಿರಂತರವಾಗಿ ವಿಡಿಯೋ ಸೆರೆ ಹಿಡಿದು ಕಳುಹಿಸಿದ್ದೇವೆ ಎನ್ನುತ್ತಾರೆ ಡಾ.ವಿನಾಯಕ ಮಾಳಿ.ತನ್ನ ಅಪ್ರತಿಮ ಜ್ಞಾಪಕ ಶಕ್ತಿಯಿಂದಾಗಿ ೨೦೨೪ರ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ದಾಖಲಾಗಿ ಪ್ರಮಾಣಪತ್ರ ಪಡೆದಿರುವ ಈ ಪುಟ್ಟಪೋರನ ತೊದಲು ನುಡಿಯಿಂದ ಫಟಾ ಪಟ್ ಎಂದು ಹೇಳುವ ಉತ್ತರಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.