ಮದ್ಯ ಮಾರಾಟ ನಿಷೇಧ‌ ಮಾಡಿಸುವುದು ನಮ್ಮಿಂದ ಅಸಾಧ್ಯವಾಗಬಹುದೇನೋ. ಆದರೆ, ಕುಡಿತಕ್ಕೆ ಬಲಿಯಾಗುವವರನ್ನು‌ ತಡೆಯುವುದು ಎಲ್ಲ ಧರ್ಮ ಗುರುಗಳು, ಪ್ರಜ್ಞಾವಂತರಿಂದ‌ ಸಾಧ್ಯ ಎಂದು ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯ ಮಾರಾಟ ನಿಷೇಧ‌ ಮಾಡಿಸುವುದು ನಮ್ಮಿಂದ ಅಸಾಧ್ಯವಾಗಬಹುದೇನೋ. ಆದರೆ, ಕುಡಿತಕ್ಕೆ ಬಲಿಯಾಗುವವರನ್ನು‌ ತಡೆಯುವುದು ಎಲ್ಲ ಧರ್ಮ ಗುರುಗಳು, ಪ್ರಜ್ಞಾವಂತರಿಂದ‌ ಸಾಧ್ಯ ಎಂದು ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯ ಚಟುವಟಿಕೆ ಕುರಿತು ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ನಿರಂತರ ಜಾಗೃತಿ ಮತ್ತು ದೃಢ ಸಂಕಲ್ಪದಿಂದ ಮಾತ್ರ‌ ವ್ಯಸನ ಮುಕ್ತ ಸಮಾಜದ‌ ಕನಸು ನನಸಾಗಲು ಸಾಧ್ಯವಿದೆ. ವ್ಯಸನಿಗಳು ಕಡಿಮೆಯಾದಂತೆ ಮದ್ಯದ ಅಂಗಡಿ, ಇತರೆ ಮಾದಕ ವಸ್ತುಗಳ ಮಾರಾಟ ಕ್ಷೀಣಿಸುತ್ತದೆ‌ ಎಂದು ತಿಳಿಸಿದರು.

ಭವಿಷ್ಯತ್ತಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವ ಕಾರ್ಯವಾಗಬೇಕು. ಪ್ರತಿ ಶಿಕ್ಷಕರು ಒಂದೊಂದು ವಿದ್ಯಾರ್ಥಿಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಬದುಕಿನಲ್ಲಿ ಆಸ್ಪದ ಕೊಡುವುದಿಲ್ಲವೆಂಬ ಪ್ರಮಾಣ ಪಡೆಯಬೇಕು. ಅಲ್ಲದೇ ವಿದ್ಯಾರ್ಥಿಗಳು ಸಹ ಪೋಷಕರಿಗೆ, ಅಕ್ಕ-ಪಕ್ಕದ ನಿವಾಸಿಗಳಿಗೆ ಮದ್ಯಪಾನ ಮಾಡದಂತೆ ಭಾವನಾತ್ಮಕವಾಗಿ ಕಟ್ಟಿಹಾಕಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ,‌ ಅಧಿಕಾರ ಸ್ವೀಕರಿಸಿದ ದಿನದಿಂದ‌ ನಿರಂತರವಾಗಿ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಲಾಗುತ್ತಿದೆ.‌ ನಕಲಿ‌, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಎಲ್ಲ ಜಿಲ್ಲೆಯ ಅಬಕಾರಿ ಡಿಸಿಗಳಿಗೆ ಪತ್ರದ ಮೂಲಕ ಸೂಚಿಸಲಾಗಿದೆ. ಪಠ್ಯ-ಪುಸ್ತಕಗಳಲ್ಲಿ ಮದ್ಯ, ಮಾದಕ ವಸ್ತುಗಳ ವ್ಯಸನಗಳಿಂದ ಆಗುವ ಅತ್ಯಂತ ಕೆಟ್ಟ ಪರಿಣಾಮ ಕುರಿತು ಸಂಭಾಷಣೆ ರೂಪದಲ್ಲಿ ಪಾಠಗಳನ್ನು ಸೇರಿಸಬೇಕಿದೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಮದ್ಯಪಾನ ಸಾಮಾಜಿಕ ಸಮಸ್ಯೆಯಾಗಿದೆ. ಹೋಗಲಾಡಿಸಲು ಮಂಡಳಿ ಅಥವಾ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದಕ್ಕೆ ಸ್ವಾಸ್ಥ್ಯ ಸಮಾಜ ಬಯಸುವ ಸಾಹಿತಿಗಳು, ಚಿಂತಕರ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶೀಧರ ಕೋಸಂಭೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಅಲಿಬಾಬಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್, ಮಂಡಳಿಯ ಕಾರ್ಯದರ್ಶಿ ಮಹೇಶ್ ಸೇರಿದಂತೆ ಮೊದಲಾದವರಿದ್ದರು.

ಸಭೆಯ ಪ್ರಮುಖ ಸಲಹೆಗಳು

ರಾಜ್ಯದ ಅಬಕಾರಿ ಕಾಯ್ದೆ ಉಲ್ಲಂಘನೆಯಾಗಂತೆ ಜಾರಿಗೊಳಿಸುವುದು. ಅಬಕಾರಿ ಇಲಾಖೆಯ ವಾರ್ಷಿಕ ತೆರಿಗೆಯಲ್ಲಿ ಶೇ.1 ರಷ್ಟು ಹಣವನ್ನು ಮಂಡಳಿ‌ ಪಡೆಯುವುದು. ವಿವಿಧ ಕಡೆ ಮದ್ಯಪಾನದ ದುಷ್ಪರಿಣಾಮ ಕುರಿತು ನಾಮಫಲಕ ಅಳವಡಿಕೆ, ತಾಲೂಕು, ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆ ನಡೆಸುವುದು. ಪತ್ರಕರ್ತರು, ಶಾಲಾ-ಕಾಲೇಜು ಶಿಕ್ಷಕರು ಹಾಗೂ ವಿವಿಗಳ‌ ಕುಲಪತಿಗಳನ್ನೊಳಗೊಂಡ ಸಭೆ ಆಗಾಗ ನಡೆಸಬೇಕು.