ಸಾರಾಂಶ
ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಇಡೀ ಜಗತ್ತಿಗೆ ವಿವೇಕ ಬೋಧಿಸಿದ ಯತಿಕುಲ ಶ್ರೇಷ್ಠ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಭಾರತೀಯ ವೇದಾಂತ ಕ್ಷೇತ್ರಕ್ಕೆ ಆದಿಗುರು ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಶಂಕರರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಇಡೀ ಜಗತ್ತಿಗೆ ಬೆಳಕು ನೀಡಿವೆ. ಅವು ಎಲ್ಲ ದೇಶ, ಎಲ್ಲ ಕಾಲಕ್ಕೂ ಅನ್ವಯವಾಗಲಿವೆ. ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಿ, ಅಳವಡಿಸಿಕೊಂಡು ಪ್ರತಿಯೊಬ್ಬರೂ ಸಹ ಮುನ್ನಡೆಯುವ ಸಂಕಲ್ಪ ಮಾಡಿದರೆ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದ ಅವರು ಲೋಕಕಲ್ಯಾಣಕ್ಕಾಗಿ ಇಡೀ ತಮ್ಮ ಜೀವನ ಮುಡಿಪಾಗಿಟ್ಟು ಶ್ರೀಗಂಧದ ಕೊರಡಿನಂತೆ ಸವೆಸಿದ ಶಂಕರಾಚಾರ್ಯರು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಸಂಚರಿಸಿ ಧರ್ಮ ಸ್ಥಾಪನೆ ಮಾಡಿದವರು. ಸನ್ಯಾಸವನ್ನು ಕೇವಲ ಧರ್ಮಾಚರಣೆಗೆ ಮಾತ್ರ ಸೀಮಿತ ಮಾಡದೇ ಧರ್ಮ ಪ್ರಚಾರದ ಜಾಗೃತಿಗೆ ಮೀಸಲಿರಿಸಿದ್ದರು ಎಂದು ಹೇಳಿದರು. ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಭರಮಣ್ಣ ಶಿವೂರ, ಪುಟ್ಟಪ್ಪ ನರೇಗಲ್, ಸಿದ್ದನಗೌಡ ಪಾಟೀಲ, ವೀರಭದ್ರಗೌಡ ಪಾಟೀಲ, ಶಿವು ತಳವಾರ, ಶಿವು ಭದ್ರಾವತಿ, ಮೇಕಾಜಿ ಕಲಾಲ, ರಾಮಚಂದ್ರ ಕಲ್ಲೇರ, ರಫೀಕ್ ಉಪ್ಪಣಸಿ, ಮಾರ್ತಾಂಡಪ್ಪ ಮಣ್ಣಮ್ಮನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.