ಕನ್ನಡಪ್ರಭ ವಾರ್ತೆ ಮಂಡ್ಯ

ವಿವಾದದ ಗೂಡಾಗಿರುವ ಜಿಲ್ಲಾ ಕುರುಬರ ಸಂಘಕ್ಕೆ ಮುಂದಿನ ಆರು ತಿಂಗಳವರೆಗೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಆಡಳಿತ ಮಂಡಳಿ ಅವಧಿ ಮುಗಿದರೂ ಚುನಾವಣೆ ನಡೆಸದೆ ಅಕ್ರಮವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಎಂ.ಸುರೇಶ್ ಸರ್ವಾಧಿಕಾರಿ ಧೋರಣೆಗೆ ಸರ್ಕಾರವೇ ಬ್ರೇಕ್ ಹಾಕಿದೆ.

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ರ ಕಲಂ ೨೭-ಎ ರನ್ವಯ ಜಿಲ್ಲಾ ಕುರುಬರ ಸಂಘಕ್ಕೆ ಮಂಡ್ಯ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ಆದೇಶ ಹೊರಡಿಸಿದ ದಿನಾಂಕದಿಂದ ೬ ತಿಂಗಳ ಅವಧಿಗೆ ನೇಮಿಸಿ ಆದೇಶಿಸಿದೆ. ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರ ವಹಿಸಿಕೊಂಡು ಸಂಘದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ರಂಗನಾಥ ಆದೇಶದಲ್ಲಿ ತಿಳಿಸಿದ್ದಾರೆ.

ಸಂಘದ ಆಡಳಿತ ಮಂಡಳಿ ಅವಧಿ ಮುಗಿದಿದ್ದರೂ ಪ್ರಸ್ತುತ ಕಾರ್ಯನಿರ್ವಾಹಕ ಮಂಡಳಿಯನ್ನು ಮುಂದುವರೆಸಲು ತೀರ್ಮಾನಿಸಿದ್ದ ಸಂಬಂಧ ಎ.ಕೃಷ್ಣ ಮತ್ತಿತರರು ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ನ್ಯಾಯಾಲಯವೂ ಸಂಘದ ಅವಧಿ ಮುಗಿದಿದ್ದಲ್ಲಿ ಕಾನೂನು ಪ್ರಕಾರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸೂಚಿಸಿತ್ತು. ತದನಂತರದಲ್ಲಿ ಉಪ ನಿಬಂಧಕರು ಎಲ್ಲಾ ದಾಖಲೆಗಳನ್ನು ಹಾಜರುಪಡಿಸುವಂತೆ ಕಾರ್ಯನಿರ್ವಾಹಕ ಮಂಡಳಿಗೆ ತಿಳಿಸಿದ್ದರು.

ಕಳೆದ ಡಿಸೆಂಬರ್ ೨೮ರಂದು ನಡೆದ ಸಂಘದ ಸಾಮಾನ್ಯಸಭೆಯ ವಿಷಯ ಸಂಖ್ಯೆ ೮ರಲ್ಲಿ ಪ್ರಸ್ತುತ ಕಾರ್ಯನಿರ್ವಾಹಕ ಮಂಡಳಿಯ ಮುಂದುವರಿಕೆ ಬಗ್ಗೆ ವಿಷಯವನ್ನು ಮಂಡಿಸಿದ್ದು, ಸಂಘದ ಅಭಿವೃದ್ಧಿ ಮತ್ತು ಕಾಮಗಾರಿ ಪ್ರಗತಿಯ ಹಂತದಲ್ಲಿರುವುದರಿಂದ ಬಹುಮತದಿಂದ ಪ್ರಸ್ತುತವಿರುವ ಕಾರ್ಯನಿರ್ವಾಹಕ ಮಂಡಳಿಯನ್ನು ಮುಂದುವರೆಸಲು ಆಡಳಿತ ಮಂಡಳಿ ತೀರ್ಮಾನಿಸಿತ್ತು.


ಸಂಘದ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ದಾಖಲೆಗಳಂತೆ ಕಾರ್ಯಕಾರಿ ಸಮಿತಿ ಅವಧಿ ಫೆ.೨೦ರಂದು ಮುಕ್ತಾಯಗೊಂಡಿದೆ. ಸಂಘದ ಬೈಲ ಸಂಖ್ಯೆ ೭, ೧೦, ೧೨ರಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರನ್ನು ವಾರ್ಷಿಕ ಮಹಾಸಭೆಯಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ಮೂಲಕ ಆಯ್ಕೆ ಮಾಡತಕ್ಕದ್ದು ಎಂದು ತಿಳಿಸಿದೆ. ಪ್ರಸ್ತುತವಿರುವ ಕಾರ್ಯನಿರ್ವಾಹಕ ಮಂಡಳಿಯನ್ನು ಮುಂದುವರೆಯಲು ತೀರ್ಮಾನಿಸಿರುವ ಅಂಶವು ಬೈಲಾಗೆ ವಿರುದ್ಧವಾಗಿರುವುದು ಕಂಡುಬಂದಿದೆ.

ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿರುವುದರಿಂದ ಮುಂದುವರೆಯಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಸಂಘದ ಚುನಾವಣೆಯನ್ನು ನಿಯಮಾನುಸಾರ ಸಕಾಲದಲ್ಲಿ ನಡೆಸಬೇಕಿರುವುದರಿಂದ ಸಂಘದ ಕಾರ್ಯಕಾರಿ ಮಂಡಳಿ ಸ್ಥಾನದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.