ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯಲ್ಲಿ ತಾಯಿ-ಶಿಶು ಮರಣವನ್ನು ತಗ್ಗಿಸಲು ಗರ್ಭಿಣಿಯರ ಸುರಕ್ಷಿತ ಹೆರಿಗೆಗೆ ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದ ತಾಯಿ ಮತ್ತು ಶಿಶು ಮರಣ, ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಹಾಗೂ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸೆಪ್ಟೆಂಬರ್ 2023 ರಿಂದ 2024ರ ಜನವರಿ ಮಾಹೆಯವರೆಗೆ 7 ತಾಯಿ ಮರಣ ಹಾಗೂ 49 ಶಿಶು ಮರಣ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಇನ್ನು ಮುಂದೆ ಯಾವುದೇ ತಾಯಿ-ಶಿಶು ಮರಣ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಬೇಕು ಎಂದರು.ಆರೋಗ್ಯ ಇಲಾಖೆಯ ವರದಿಯನುಸಾರ ಬಹುತೇಕ ತಾಯಂದಿರು ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ ಹಾಗೂ ರಕ್ತದೊತ್ತಡದಿಂದ ಮರಣ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಯಿ ಮರಣ ಪ್ರಕರಣಗಳನ್ನು ತಗ್ಗಿಸಲು ಮುಂದಿನ ೧೫ ದಿನಗಳೊಳಗಾಗಿ ಎಲ್ಲಾ ತಾಲೂಕುಗಳಲ್ಲಿ ಬ್ಲಡ್ ಬ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಸೂತಿ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ತೀವ್ರ ನಿಗಾ ಘಟಕವನ್ನು ತೆರೆಯಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸಿ.ಆರ್. ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಮಾಹೆ ಸುಮಾರು 3 ಸಾವಿರ ಮಕ್ಕಳು ಜನನವಾಗುತ್ತಿದ್ದು, ನವಜಾತ ಶಿಶುಗಳ ಆರೈಕೆಗಾಗಿ ಎಲ್ಲಾ ತಾಲೂಕುಗಳಲ್ಲಿ ತೀವ್ರ ನಿಗಾ ಘಟಕಗಳಿವೆ ಎಂದು ವಿವರಣೆ ನೀಡಿದರು. ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆ ಕಂಡುಬಂದ ಆಗತಾನೆ ಜನಿಸಿದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ/ ಇತರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದಾಗ ಪೋಷಕರು ನಿರ್ಣಯ ಕೈಗೊಳ್ಳಲು ವಿಳಂಬ ಮಾಡುತ್ತಾರೆ. ಇದರಿಂದಲೂ ಶಿಶು ಮರಣ ಪ್ರಕರಣಗಳು ವರದಿಯಾಗುತ್ತವೆ. ಅಲ್ಲದೇ ಅವಧಿ ಮುನ್ನ ಹಾಗೂ ಅವಧಿ ಮೀರಿ ಜನಿಸುವ ಮಕ್ಕಳು, ನಂಜು, ನಿಮೋನಿಯಾದಿಂದಲೂ ಶಿಶುಗಳು ಮರಣ ಹೊಂದುತ್ತವೆ ಎಂದು ಸಭೆಗೆ ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಮುಂದುವರೆದು ಮೊದಲ ಸಿಸೇರಿಯನ್ ಹೆರಿಗೆ, ಹೃದಯ ಸಂಬಂಧಿ ರೋಗ, ಅಧಿಕ ರಕ್ತದೊತ್ತಡ, ಪದೇ ಪದೇ ಗರ್ಭಪಾತ ಹೊಂದುವ, ೧೮ ವರ್ಷಕ್ಕಿಂತ ಮುನ್ನ ಹಾಗೂ ೩೦ ವರ್ಷದ ನಂತರ ಗರ್ಭ ಧರಿಸುವ, ಮಧುಮೇಹ ರೋಗದಿಂದ ಬಳಲುತ್ತಿರುವ ಗಂಡಾಂತರ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಸಲಹೆ ನೀಡುವ ಮೂಲಕ ಸುರಕ್ಷಿತ ಹೆರಿಗೆಗೆ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ.ಬಿ.ಎಸ್. ರಾಮೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಸಾಂಕ್ರಾಮಿಕ ರೋಗಗಳಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕಳೆದ ಜನವರಿ 2023 ರಿಂದ ಡಿಸೆಂಬರ್ 2023ರವರೆಗೆ 24,917 ನಾಯಿಕಡಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಶಿರಾ ತಾಲೂಕು ದೊಡ್ಡ ಅಗ್ರಹಾರದ 13 ವರ್ಷದ ಬಾಲಕನೊಬ್ಬ ಹುಚ್ಚುನಾಯಿ ಕಡಿತದಿಂದ ಸಾವನಪ್ಪಿದ್ದಾನೆ. ಹುಚ್ಚು ನಾಯಿ ಕಡಿತಕ್ಕೆ ಸಕಾಲ(ನಾಯಿ ಕಡಿತಕ್ಕೊಳಗಾಗಿ 24 ಗಂಟೆಯೊಳಗೆ)ದಲ್ಲಿ ಚುಚ್ಚುಮದ್ದು ಪಡೆಯದಿದ್ದರೆ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ನಾಯಿ ಕಡಿತಕ್ಕೊಳಗಾದವರು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರಲ್ಲದೆ, ಹಾವಿನ ಕಡಿತದಿಂದ ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆ, ಮುದ್ದೇನಹಳ್ಳಿ, ಕುಣಿಗಲ್ ತಾಲೂಕಿನ ಜಿನ್ನಾಗರ ಹಾಗೂ ಪಾವಗಡ ತಾಲೂಕಿನ ದೊಡ್ಡಳ್ಳಿಯಲ್ಲಿ ತಲಾ ಒಂದರಂತೆ ೪ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.ಕಳೆದ ಏಪ್ರಿಲ್ 2023 ರಿಂದ 2024ರ ಜನವರಿ ಮಾಹೆಯವರೆಗೆ ತಂಬಾಕು ನಿಷೇಧ ಕಾಯ್ದೆಯಡಿ ಒಟ್ಟು 1861 ಪ್ರಕರಣ ದಾಖಲಿಸುವ ಮೂಲಕ 1,79,180 ರು. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.
ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದ ಜಿಲ್ಲಾಧಿಕಾರಿಗಳು ತಂಬಾಕು ನಿಯಂತ್ರಣ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು, ತಾಲೂಕುವಾರು ತಿಂಗಳಿಗೆ ಕನಿಷ್ಠ 500 ಪ್ರಕರಣಗಳನ್ನು ದಾಖಲಿಸಿ ಕಾನೂನು ಪಾಲನೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರಲ್ಲದೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರುತ್ತಿದ್ದು, ಈ ಸಂದರ್ಭವನ್ನು ಬಳಸಿಕೊಂಡು ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳು, ತಂಬಾಕು ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಎನ್. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿಗಳು, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಂಗಸ್ವಾಮಿ, ಶ್ರೀದೇವಿ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.