ಒತ್ತಡಕ್ಕೆ ಎದೆಗುಂದದೇ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ

| Published : Jan 24 2025, 12:49 AM IST

ಒತ್ತಡಕ್ಕೆ ಎದೆಗುಂದದೇ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ರಕ್ಷಣೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎಂತಹುದೇ ಕಠಿಣ ಪರಿಸ್ಥಿತಿಯಲ್ಲಿ ಪೊಲೀಸರಿಗೆ ನೆರವಾಗುವ ಗೃಹರಕ್ಷಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಾರ್ವಜನಿಕ ರಕ್ಷಣೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎಂತಹುದೇ ಕಠಿಣ ಪರಿಸ್ಥಿತಿಯಲ್ಲಿ ಪೊಲೀಸರಿಗೆ ನೆರವಾಗುವ ಗೃಹರಕ್ಷಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾ ಗೃಹರಕ್ಷಕರ ದಳ ಆಯೋಜಿಸಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಉತ್ಸವ, ಬಂದೋಬಸ್ತ್ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಪೊಲೀಸರ ಮಾದರಿಯಲ್ಲಿ ಸಮವಸ್ತ್ರ ಧರಿಸಿ ಶಿಸ್ತು ಬದ್ಧವಾಗಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುವ ಗೃಹರಕ್ಷಕ ದಳವನ್ನು ಪೊಲೀಸ್ ಇಲಾಖೆಯ ಒಂದು ಭಾಗವಾಗಿ ಪರಿಗಣಿಸಲಾಗಿದೆ. ದೇಶದ ಗಡಿ ಭದ್ರತಾ ಪಡೆಯು ಅಗತ್ಯ ಸಮಯದಲ್ಲಿ ಗೃಹರಕ್ಷಕರ ಸಹಾಯ ಪಡೆಯಲಿದೆ. ಇಂತಹ ಮಹತ್ವದ ಕಾರ್ಯಗಳಲ್ಲಿ ತೊಡಗುವ ಗೃಹರಕ್ಷಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಗಮನ ಹರಿಸಬೇಕು ಎಂದರು.

ಪೊಲೀಸರಂತೆ ಗೃಹರಕ್ಷಕರಿಗೂ ಒತ್ತಡಗಳಿವೆ. ಒತ್ತಡದ ಜೀವನಕ್ರಮದಿಂದ ಗೃಹರಕ್ಷಕರು ಎದೆಗುಂದದೇ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಅದಕ್ಕಾಗಿ ದೈಹಿಕ ಆರೋಗ್ಯವನ್ನು ಸದೃಢಗೊಳಿಸಿ ದೃಢಕಾಯರಾಗಬೇಕು. ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಬೇಕು. ರಾಜ್ಯದಲ್ಲಿಯೇ ಉತ್ತಮ ಕಾರ್ಯನಿರ್ವಹಣೆ ಮಾಡುವ ಮೂಲಕ ಜಿಲ್ಲೆಗೆ ಹೆಮ್ಮೆ ತರಬೇಕು ಎಂದು ಗೃಹರಕ್ಷಕರಿಗೆ ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಮಾತನಾಡಿ, ಗೃಹರಕ್ಷಕರು ಸಾರ್ವಜನಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರಿಗೆ ಸಹಾಯಹಸ್ತ ಚಾಚಬೇಕು. ಕೌಟುಂಬಿಕ ಜೀವನ ಹಾಗೂ ವೈಯಕ್ತಿಕ ಆರೋಗ್ಯದ ಬಗ್ಗೆಯೂ ನಿಗಾ ವಹಿಸಬೇಕು. ಪೊಲೀಸ್ ಮಾದರಿಯಲ್ಲಿ ಉತ್ತಮ ಸೇವೆಯನ್ನು ಪರಿಗಣಿಸಿ ಗೃಹರಕ್ಷಕರಿಗೂ ವಾರ್ಷಿಕ ಪ್ರಶಸ್ತಿ ದೊರೆಯುವಂತಾಗಬೇಕು ಎಂದರು.

ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಮಾತನಾಡಿ, ಶಿಸ್ತುಬದ್ಧ ಸೇವಾಕಾರ್ಯಕ್ಕೆ ಹೆಸರಾಗಿರುವ ಗೃಹರಕ್ಷಕರನ್ನು ಪೊಲೀಸರಂತೆ ಗೌರವಿಸಲಾಗುತ್ತಿದೆ. ಇದಕ್ಕೆ ಗೃಹರಕ್ಷಕರ ಸಮವಸ್ತ್ರವೇ ಕಾರಣವಾಗಿದೆ. ಬಂದೋಬಸ್ತ್ ಹಾಗೂ ಪ್ರಕೃತಿ ವಿಕೋಪ ಸಮಯದಲ್ಲಿ ಗೃಹರಕ್ಷಕರ ಸೇವೆ ಅನನ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಎದುರಾಗುವ ಒತ್ತಡವನ್ನು ಬದಿಗೊತ್ತಿ ಕರ್ತವ್ಯನಿಷ್ಠೆ ಮೆರೆಯುವ ಗೃಹರಕ್ಷಕರ ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದು ತಿಳಿಸಿದರು.

ಗೃಹರಕ್ಷಕರ ದಳ ಜಿಲ್ಲಾ ಸಮಾದೇಷ್ಟ ಎಸ್.ಜಿ. ಮಹಾಲಿಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಗೃಹರಕ್ಷಕ ದಳದ 9 ಘಟಕಗಳು ಸಾರ್ವಜನಿಕ ಸೇವಾಕಾರ್ಯದಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಗೃಹರಕ್ಷಕ ದಳದ ಘಟಕಗಳನ್ನು ಹೆಚ್ಚು ಸುಸಜ್ಜಿತಗೊಳಿಸಲು ಶ್ರಮಿಸಲಾಗುವುದು ಎಂದರು.

ನಿವೃತ್ತ ಗೃಹರಕ್ಷಕರನ್ನು ಹಾಗೂ ಗೃಹರಕ್ಷಕರ ವೃತ್ತಿಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಗೃಹರಕ್ಷಕ ದಳದ ಎಲ್ಲಾ ಘಟಕಾಧಿಕಾರಿಗಳು ಉಪಸ್ಥಿತರಿದ್ದರು.