ಸಾರಾಂಶ
ಹಾವೇರಿ: ಆರೋಗ್ಯಕರ ಜೀವನ ಶೈಲಿ ಅಳವಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ ಹೇಳಿದರು.ನಗರದ ಹುಕ್ಕೇರಿಮಠ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ 3ನೇ ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕತೆ ಹೆಚ್ಚಿದಂತೆ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾದರೆ, ಬದಲಾದ ಜೀವನ ಶೈಲಿಯಿಂದ ಜೀವನ ಪರ್ಯಂತ ಕಾಯಿಲೆಗಳು ಹೆಚ್ಚಾಗುತ್ತವೆ. ಯುವ ಜನಾಂಗವೇ ಇಂಥ ರೋಗಗಳಿಗೆ ಬಲಿಯಾಗುತ್ತಿದೆ ಎಂದರು.ಸವಣೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಸಾಲಿಮಠ ಮಾತನಾಡಿ, ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ. ಸಂಪತ್ತಿನ ಸಂಪಾದನೆಯೇ ಜೀವನದ ಮುಖ್ಯ ಉದ್ದೇಶ ಎಂದು ಭಾವಿಸಿಕೊಂಡು ಸ್ವಾರ್ಥ, ಲೋಭತನ ಹೆಚ್ಚು ಮಾಡಿಕೊಂಡು, ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡಾಗ, ದೈಹಿಕವಾಗಿ ರೋಗಗಳು ಅಂಟಿಕೊಳ್ಳುತ್ತವೆ. ಹೀಗಾಗಿ ನಿಸ್ವಾರ್ಥ ಸೇವೆ ನಮ್ಮನ್ನು ಹೆಚ್ಚು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ ಎಂದರು.ಸ್ತ್ರೀರೋಗ ತಜ್ಞ ಡಾ. ಚಿನ್ಮಯ್ ಕುಲಕರ್ಣಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇತ್ತೀಚೆಗೆ ಗರ್ಭಹೀನತೆ ಹೆಚ್ಚಾಗಿ ಕಾಣುತ್ತಿದ್ದು, ದೈಹಿಕ ಶ್ರಮದ ಕೆಲಸ ಇಲ್ಲವಾಗಿದೆ. ಅನಾರೋಗ್ಯಕರ ಜೀವನ ಶೈಲಿ, ಬೊಜ್ಜು, ಜಂಕ್‌ಫುಡ್ ಸೇವನೆಯಿಂದ ಇಂಥ ಸಮಸ್ಯೆಗಳು ಕಾಣಿಸುತ್ತಿವೆ. ಹೀಗಾಗಿ ಗರ್ಭಿಣಿಯರಿಗೆ ದೈಹಿಕ ಶ್ರಮ, ಉತ್ತಮ ಆಹಾರ ಸೇವನೆಯಿಂದ ಸಹಜ ಹೆರಿಗೆ ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ನಗರದ ವೈದ್ಯರಾದ ಡಾ. ಮೃತ್ಯುಂಜಯ ತುರಕಾಣಿ, ಡಾ. ಸುದೀಪ ಪಂಡಿತ, ಡಾ. ವಿನಾಯಕ ಕರ್ಣಂ, ಡಾ. ಮಧು ಕೆ.ಆರ್. ವಿರೂಪಾಕ್ಷ ಲಮಾಣಿ ದಂಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಾಗಪ್ಪ ಮುರನಾಳ, ರಾಚಣ್ಣ ಲಂಬಿ, ಶಿವಬಸಯ್ಯ ಹಾಲಯ್ಯನವರಮಠ, ಜಗದೀಶ ತುಪ್ಪದ, ಮಹೇಶ ಚಿನ್ನಿಕಟ್ಟಿ, ವiಹಾಂತೇಶ ಮಳಿಮಠ, ಆರ್.ಎಸ್. ಮಾಗನೂರ, ಶಿವಣ್ಣ ಶಿರೂರ, ಬಿ. ಬಸವರಾಜ, ಮಂಜುನಾಥ ಕಡತಿ, ಎಸ್.ವಿ. ಹಿರೇಮಠ, ಎ.ಬಿ. ಗುಡ್ಡಳ್ಳಿ, ರತ್ನಾ ಭರತನೂರಮಠ, ಚಂಪಾ ಹುಣಸಿಕಟ್ಟಿ, ಎಂ.ಎಸ್. ಮರಿಗೂಳಪ್ಪನವರ, ರವಿ ಎಸ್.ವಿ. ಕರಬಸಪ್ಪ ಹಲಗಣ್ಣನವರ, ಮಲ್ಲಿಕಾರ್ಜುನ ಹಂದ್ರಾಳ ಇತರರು ಇದ್ದರು. ಹುಕ್ಕೇರಿಮಠದ ಅಕ್ಕನ ಬಳಗದವರು ಪ್ರಾರ್ಥಿಸಿದರು. ಶಿವಯೋಗಿ ವಾಲಿಶೆಟ್ಟರ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ನಾಗರಾಜ ನಡುವಿನಮಠ ವಂದಿಸಿದರು.