ಸಾರಾಂಶ
ನಿಮ್ಮ ಸತತ ಪರಿಶ್ರಮದಿಂದ ಯಶಸ್ಸು ಗಳಿಸಿರುವಿರಿ, ಮುಂದಿನ ಶೈಕ್ಷಣಿಕ ಗುರಿಯನ್ನು ತಲುಪಲು ದೊಡ್ಡ ಕನಸು ಕಾಣಬೇಕಿದೆ
ಹೂವಿನಹಡಗಲಿ:ಶೈಕ್ಷಣಿಕ ಓದಿನ ಜೊತೆಗೆ ಸಮಾಜಮುಖಿ ಚಿಂತನೆ ಅಳವಡಿಸಿಕೊಳ್ಳಬೇಕೆಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ವತಿಯಿಂದ ಆಯೋಜಿಸಿದ್ದ, 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ನಿಮ್ಮ ಸತತ ಪರಿಶ್ರಮದಿಂದ ಯಶಸ್ಸು ಗಳಿಸಿರುವಿರಿ, ಮುಂದಿನ ಶೈಕ್ಷಣಿಕ ಗುರಿಯನ್ನು ತಲುಪಲು ದೊಡ್ಡ ಕನಸು ಕಾಣಬೇಕಿದೆ ಎಂದರು.
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಮಾತನಾಡಿ, ಅಂತರ್ಜಾಲ ಪ್ರಭಾವದಿಂದ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ.ಅಂಕಗಳನ್ನು ಬೆನ್ನು ಬಿದ್ದು, ಹೆತ್ತವರು ವೃದ್ಧಾಶ್ರಮ ಸೇರುವ ಹಾಗೆ ಮಾಡಬೇಡಿ ಎಂದು ಹೇಳಿದರು.
ಉನ್ನತ ಹುದ್ದೆಗೆ ಸೇರಿದಾಗ ದುಡಿಮೆಯ ಒಂದು ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಾಗ ಸಮಾಜ ನಿಮ್ಮನ್ನ ಗೌರವದಿಂದ ಕಾಣುತ್ತದೆ. ಸಮಾಜಕ್ಕೆ ಉತ್ತಮ ಕೆಲಸ ಮಾಡಿ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ. ಎಂ.ಅಶೋಕ, ಡಯಟ್ ಉಪನ್ಯಾಸಕ ನಿಂಗಪ್ಪ, ಶಿಕ್ಷಕರ ಸಂಘಟನೆಯ ಎಂ. ಶಿವಲಿಂಗಪ್ಪ, ಎಂ.ಶೇಕ್ ಅಹಮದ್, ಪಿ.ಕೆ.ಪಾಟೀಲ್, ಸರ್ವಮಂಗಳ, ಇತರರು ಉಪಸ್ಥಿತರಿದ್ದರು. ಮುಖ್ಯ ಗುರುಗಳು ಸಂಘದ ಅಧ್ಯಕ್ಷ ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ, ತಾಲೂಕಿನ 49 ಸರ್ಕಾರಿ ಅನುದಾನಿತ, ಅನುದಾನ ರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.ಅರ್ಚನಾ ಜೋಷಿ, ಸುರೇಶ ಅಂಗಡಿ, ಬನ್ನೆಪ್ಪ ಕೊಳಚಿ ನಿರ್ವಹಿಸಿದರು.