ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಹವಾಮಾನ ಸ್ಥಿತಿಗತಿಗೆ ಅನುಗುಣವಾಗಿ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜೊತೆಗೆ ವೃತ್ತಿಯಲ್ಲಿ ಪರಿಪೂರ್ಣತೆ ಕಂಡರೆ ಕೃಷಿಯನ್ನೂ ಒಳ್ಳೆಯ ಉದ್ದಿಮೆಯನ್ನಾಗಿಸಿಕೊಳ್ಳಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಬೆಳ್ಳೂರಿನಲ್ಲಿ ಕರ್ನಾಟಕ ಯುವ ರೈತ ಸೇನೆ ಮತ್ತು ಪ್ರಜಾ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿ ಮೇಳ ಮತ್ತು ಯುವ ರೈತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೈತರ ಮಕ್ಕಳಾದ ನಾವು ಕೃಷಿಯಲ್ಲಿ ತೊಡಗಿಕೊಳ್ಳುವಾಗ ಜ್ಞಾನ ಮತ್ತು ವಿಜ್ಞಾನ ಎರಡನ್ನೂ ಮೈಗೂಡಿಸಿಕೊಳ್ಳಬೇಕು. ಈ ಹಿಂದೆ ಕಾಲಕ್ಕೆ ತಕ್ಕಂತೆ ಮಳೆಯಾಗಿ ಬೆಳೆದ ಬೆಳೆಯೂ ಸಹ ರೈತರ ಕೈಸೇರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಾಟಿ ಮಾಡುವ ವೇಳೆ ಬಿಸಿಲು, ಕೊಯ್ಲಿನ ಸಮಯದಲ್ಲಿ ಮಳೆ ಬಂದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.ಉತ್ತರ ಕರ್ನಾಟಕ ಭಾಗದ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 160 ಟನ್ ಕಬ್ಬು ಬೆಳೆಯುತ್ತಿದ್ದಾರೆ. ಆದರೆ, ಜಿಲ್ಲೆ ಹಾಗೂ ಹಳೆ ಮೈಸೂರು ಭಾಗದ ರೈತರು ಕೇವಲ 70 ರಿಂದ 80 ಟನ್ ಕಬ್ಬು ಬೆಳೆಯುತ್ತಾರೆ. ಆದ್ದರಿಂದ ಈ ಭಾಗದ ರೈತರೂ ಸಹ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚು ಆದಾಯಗಳಿಸಬೇಕು ಎಂದರು.
ಕೃಷಿ ಮೇಳಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಅನೇಕ ವಿಚಾರಗಳು ವಿನಿಮಯವಾಗುತ್ತವೆ. ಶ್ರಮ ಜೀವಿಯಾದ ರೈತ ಕನಿಷ್ಠ ಪ್ರಮಾಣದ ಬದುಕನ್ನು ರೂಪಿಸಿಕೊಳ್ಳಲು ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವೃತ್ತಿಯಲ್ಲಿ ಪರಿಪೂರ್ಣತೆ ಕಂಡರೆ ಯಶಸ್ಸು ಕಾಣಬಹುದು ಎಂದರು.ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹವಾಮಾನ ಮತ್ತು ಪರಿಸರ ಬದಲಾದಂತೆ ಕೃಷಿ ಪದ್ಧತಿಯನ್ನೂ ಸಹ ಬದಲಾಯಿಸಿಕೊಂಡು ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರು ಬೆಳೆ ಬೆಳೆಯಬೇಕು ಎಂದರು.
ಕೃಷಿ ಮೇಳಗಳ ಮೂಲಕ ರೈತರಿಗೆ ಅರಿವು ಅತ್ಯವಶ್ಯಕ. ಕೃಷಿ ತಂತ್ರಜ್ಞರು ಮತ್ತು ವಿಜ್ಞಾನಿಗಳ ಪ್ರಕಾರ ಮುಂದಿನ ವರ್ಷವೂ ಸಹ ಶೇ.85ರಷ್ಟು ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೈತರು ಈಗಿನಿಂದಲೇ ಬೆಳೆ ಬೆಳೆಯುವ ಪದ್ಧತಿ ಬದಲಾಯಿಸಿಕೊಳ್ಳಬೇಕಿದೆ ಎಂದರು.ಇದಕ್ಕೂ ಮುನ್ನ ನಿರ್ಮಲಾನಂದನಾಥ ಶ್ರೀಗಳು ಮತ್ತು ಸಚಿವ ಚಲುವರಾಯಸ್ವಾಮಿ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ವೇದಿಕೆಗೆ ಕರೆತರಲಾಯಿತು. ಕೃಷಿ ಮೇಳದ ಅಂಗವಾಗಿ ಹತ್ತಾರು ಬಗೆಯ ಸಿರಿ ಧಾನ್ಯ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗಿತ್ತು.
ಸಮಾರಂಭದ ವೇದಿಕೆಯಲ್ಲಿ ತಾಲೂಕಿನ ಪ್ರಗತಿಪರ ಯುವ ರೈತರಾದ ಸಿ.ಎನ್.ನಟರಾಜು, ಯೋಗೇಶ್‌ಗೌಡ, ಮರಡೀಪುರಸಂತೋಷ್, ಕವಿತಾ ನಾಗರಾಜು ಮತ್ತು ಪರಮೇಶ್‌ಬಿ.ಗೌಡ ಅವರಿಗೆ ಯುವ ರೈತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಯುವ ರೈತ ಸೇನೆ ರಾಜ್ಯಾಧ್ಯಕ್ಷ ಕೆ.ಎಂ.ಲೋಹಿತ್‌ಗೌಡ, ಪ್ರಜಾ ಟ್ರಸ್ಟ್‌ನ ಅಧ್ಯಕ್ಷ ಮೋಹನ್‌ಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಬೆಳ್ಳೂರು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯಾಸೀನ್, ಜಂಟಿ ಕೃಷಿ ನಿರ್ದೇಶಕ ಅಶೋಕ್, ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮಂಜೇಗೌಡ, ರೈತ ಸೇನೆಯ ಪದಾಧಿಕಾರಿಗಳಾದ ನಾಗರಾಜು, ಕೆ.ಆರ್.ಶಿವಕುಮಾರ್, ಬಿ.ವಿ.ರಾಜು, ಯೋಗರಾಜು, ಮಂಜು ಸೇರಿದಂತೆ ಹಲವರು ಹಾಜರಿದ್ದರು.18ಕೆಎಂಎನ್ ಡಿ24
ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿ ಮೇಳದಲ್ಲಿ ತಾಲೂಕಿನ ಐದು ಮಂದಿಗೆ ಯುವ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.