ಮಳೆ ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯವಾಗಬೇಕು

| Published : Mar 29 2024, 12:53 AM IST

ಸಾರಾಂಶ

ಹನಿ ನೀರಿಗೂ ಮಹತ್ವವಿದೆ, ನೀರಿನ ಮಿತಬಳಕೆ, ವ್ಯರ್ಥವಾಗುವುದನ್ನು ತಡೆಯುವುದು, ಪ್ರತಿ ಮನೆಗೂ ಮಳೆ ಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಮಳೆ ನೀರು ಹರಿದು ವ್ಯರ್ಥವಾಗುವುದನ್ನು ತಪ್ಪಿಸುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ

ಕನ್ನಡಪ್ರಭ ವಾತೆ ಕೋಲಾರ

ಪ್ರತಿ ಜೀವಿ, ಸಸ್ಯದ ಉಳಿವಿಗೆ ಕಾರಣವಾದ ಜೀವಜಲ ಉಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು, ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮೂಲಕ ನೀರಿನ ಮಿತಬಳಕೆ ಮತ್ತು ಮಳೆ ಕೊಯ್ಲು ಪದ್ಧತಿ ಕಡ್ಡಾಯ ಅಳವಡಿಕೆಗೆ ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್‌ ಎಸ್.ಹೊಸಮನಿ ಸಲಹೆ ನೀಡಿದರು.

ನಗರದ ಟಮಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ವಿಶ್ವಜಲದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ೧೯೯೨ ರಲ್ಲಿ ವಿಶ್ವಸಂಸ್ಥೆ ತನ್ನ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಮಾ.೨೨ರಂದು ವಿಶ್ವ ಜಲದಿನ ಆಚರಿಸುವ ನಿರ್ಣಯ ಕೈಗೊಂಡಿದ್ದು, ಅದರಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ, ಈ ಸಾಲಿನ ಘೋಷ ವಾಕ್ಯ ‘ಶಾಂತಿಗಾಗಿ ನೀರು’ ಎಂಬುದಾಗಿದೆ ಎಂದರು. ಮಳೆ ಕೊಯ್ಲು ಅಳವಡಿಸಿ

ಪ್ರತಿ ಹನಿ ನೀರಿಗೂ ಮಹತ್ವವಿದೆ, ನೀರಿನ ಮಿತಬಳಕೆ, ವ್ಯರ್ಥವಾಗುವುದನ್ನು ತಡೆಯುವುದು, ಪ್ರತಿ ಮನೆಗೂ ಮಳೆ ಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಮಳೆ ನೀರು ಹರಿದು ವ್ಯರ್ಥವಾಗುವುದನ್ನು ತಪ್ಪಿಸಿವುದು ಇದೆಲ್ಲಾ ಅಗತ್ಯವಿದ್ದು, ನೀರು ಉಳಿಸುವುದು ಸಮಾಜದ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದರು.

ಒಂದು ದೇಶದ ಸಮೃದ್ದಿ, ಅಭಿವೃದ್ದಿ ಎಲ್ಲವೂ ನೀರನ್ನೇ ಅವಲಂಭಿಸಿದೆ, ನೀರಿಲ್ಲದೇ ಬದುಕು ಅಸಾಧ್ಯ, ಇಸ್ರೇಲ್ ಎಂಬ ಸಣ್ಣ ರಾಷ್ಟ್ರ ಅಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ ನೀರಿನ ಮಿತ ಬಳಕೆ, ಇಬ್ಬನಿ ಕೊಯ್ಲು ಮೂಲಕ ಕುಡಿಯುವ ನೀರಿನ ಸಂಗ್ರಹ, ಆಧುನಿಕ ಕೃಷಿಯ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದರು.

ಮಾದಕವಸ್ತು ಬಳಸಬೇಡಿ

ಇದೇ ಸಂದರ್ಭದಲ್ಲಿ ಮಾದಕ, ತಂಬಾಕು ವ್ಯಸನ ತಪ್ಪಿಸಲು ಸಮಾಜಕ್ಕೆ ಅರಿವು ನೀಡಲು ಕೋರಿದ ಅವರು, ಕಾನೂನುಗಳ ಪಾಲನೆಯಿಂದ ಉತ್ತಮ ಜೀವನ ಸಾಧ್ಯ ಎಂದು ತಿಳಿಸಿ ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಹಕ್ಕುಗಳು ಮತ್ತಿತರ ಕಾನೂನುಗಳ ಕುರಿತು ಅರಿವು ಮೂಡಿಸಿದರು.

ಪರಿಸರ ಮಾಲಿನ್ಯ ತಡೆಗಟ್ಟಿ

ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಡಾ.ಡಿ.ರಾಜು ಮಾತನಾಡಿ, ಪರಿಸರ ಮಾಲಿನ್ಯ ತಡೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿ, ನೀರಿನಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ ಹಾಗೂ ಅಂತಹ ಮೂರ್ತಿಗಳ ಬಳಕೆಗೆ ನಿಷೇಧ ಹಾಕಿ ಜನರಿಗೆ ಮಾರ್ಗದರ್ಶನ ನೀಡಲಾಯಿತು ಎಂದರು. ಈ ವೇಳೆ

ಪರಿಸರ ಅಧಿಕಾರಿ ಆರ್.ಕೆ.ಚೈತನ್ಯ ಇದ್ದರು.