ಕಲಿತ ಕಾಲೇಜು ಅಭಿವೃದ್ಧಿಗೆ ಮುಂದಾಗಿ

| Published : Nov 24 2024, 01:45 AM IST

ಕಲಿತ ಕಾಲೇಜು ಅಭಿವೃದ್ಧಿಗೆ ಮುಂದಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ವಿದ್ಯಾರ್ಥಿಗಳ ಸಮಾಗಮದಲ್ಲಿ ‘ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ’ ಕಾರ್ಯಕ್ರಮವನ್ನು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಲಿತ ಕಾಲೇಜಿನ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾಗಮದಲ್ಲಿ ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾದರು.

ಎಲ್ಲವನ್ನೂ ಸರ್ಕಾರವೇ ಮಾಡುತ್ತೆ ಎಂದು ಕಾಯಬಾರದು. ಐಐಟಿಗಳಲ್ಲಿ ಅಲ್ಲಿನ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಸಹ್ಯಾದ್ರಿ ವಿಜ್ಞಾನ ಕಾಲೇಜು ಹೆಸರಾಂತ ಕಾಲೇಜು. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳೇ ರಾಯಭಾರಿಗಳು. ಕಾಲೇಜಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು. ಈ ನೆಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಕೆಲಸ ಮಾಡಲಿ ಎಂದರು.

ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಕಾಲೇಜು ಅಭಿವೃದ್ಧಿಗಾಗಿ ಹಲವು ಕೆಲಸಗಳು ಆಗಬೇಕಿದೆ. ಎಲ್ಲರೂ ಸೇರಿ ಈ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.

ಕುವೆಂಪು ವಿವಿ ಕುಲಸಚಿವ ಡಾ.ಎಸ್.ಎಂ.ಗೋಪಿನಾಥ್ ಮಾತನಾಡಿ, ಇಲ್ಲಿನ ಅಧ್ಯಾಪಕ ವೃಂದ ಯಾವತ್ತೂ ಉನ್ನತ ದರ್ಜೆಯಲ್ಲಿತ್ತು. ಈ ಕಾಲೇಜು ಜೀವನ ಕೊಟ್ಟಿದೆ. ಇದರ ಅಭಿವೃದ್ಧಿಗೆ ಎಲ್ಲರೂ ಕೂಡಿ ಕೆಲಸ ಮಾಡಬೇಕು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್.ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿ, 1941 ರಲ್ಲಿ ಆರಂಭವಾದ ಕಾಲೇಜು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಇನ್ನಷ್ಟು ಬೆಳೆಸಬೇಕು. ಈ ಕಾಲೇಜಿನ‌ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾಜಿ ಶಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿದರು.

ಸಹಕಾರ್ಯದರ್ಶಿ ಉಮೇಶ್ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಾಗರಾಜ್ ಪರಿಸರ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಹರ್ಷ ಮತ್ತು ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಡೀ ದಿನ ಹಿರಿಯ ವಿದ್ಯಾರ್ಥಿಗಳು ಕಾಲೇಜು ಮತ್ತು ಗುರುಗಳ ನೆನಪು ಮೆಲುಕು ಹಾಕಿದರು. ಹಿರಿಯ ವಿದ್ಯಾರ್ಥಿಗಳ ಸಂಘ,ಕಾಲೇಜು ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾರ್ಯಕ್ರಮ ಅಯೋಜಿಸಲಾಗಿತ್ತು.