ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಣೆಗೆ ಸಲಹೆ

| Published : Mar 24 2024, 01:36 AM IST

ಸಾರಾಂಶ

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ ನಡೆಯಿತು.ಡಿಎಸ್‌ಪಿ ಎಂ. ಪಾಂಡುರಂಗಯ್ಯ ಮಾತನಾಡಿ,. ಹೋಳಿ ಹಬ್ಬವನ್ನು ಸೌಹಾರ್ದಯುತ ಮತ್ತು ಶಾಂತಿಯುತವಾಗಿ ಆಚರಿಸಬೇಕು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಆಚರಿಸಬೇಕೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಹೋಳಿ ಹಬ್ಬವನ್ನು ಸೌಹಾರ್ದಯುತ ಮತ್ತು ಶಾಂತಿಯುತವಾಗಿ ಆಚರಿಸಬೇಕು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಆಚರಿಸಬೇಕೆಂದು ಡಿಎಸ್‌ಪಿ ಎಂ. ಪಾಂಡುರಂಗಯ್ಯ ಹೇಳಿದರು.

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒತ್ತಾಯ ಪೂರ್ವಕ ಬಣ್ಣ ಹಚ್ಚದೆ, ಒಪ್ಪಿಗೆಯಿಂದ ಬಣ್ಣದಾಟ ಆಡಬೇಕು ಎಂದು ಹೇಳಿದರು.

ಹೋಳಿ ಹಬ್ಬದ ದಿನ ಮೋಟರ್ ಸೈಕಲ್‌ನಲ್ಲಿ ಮೂರು ಜನ ರೈಡ್‌ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಯಾರದೇ ಮುಲಾಜಿಗೆ ಒಳಗಾಗದೆ ಕ್ರಮ ಜರುಗಿಸಬೇಕು. ಮತ್ತೊಬ್ಬರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಈ ಬಾರಿ ಹಬ್ಬದ ಜೊತೆಗೆ ಲೋಕಸಭಾ ಚುನಾವಣೆ ಇದ್ದು, ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ ಎಂಬುದನ್ನು ಮರೆಯಬಾರದು. ಈ ಬಗ್ಗೆ ಅಧಿಕಾರಿಗಳು ಜಾಗ್ರತೆ ವಹಿಸಬೇಕೆಂದು ಸೂಚಿಸಿದರು.

ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಮಾತನಾಡಿ, ರಾಮದುರ್ಗ ನಗರದಲ್ಲಿ ಯಾವುದೇ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಸೌಹಾರ್ದತೆಯಿಂದ ಆಚರಣೆ ಮಾಡಿ ಮಾದರಿಯಾಗಿದ್ದು, ಈ ಬಾರಿಯೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಪಿಎಸೈ ಸುನೀಲಕುಮಾರ ನಾಯಕ, ಬಾಳು ರಾಠಿ, ಜಾಹೂರ ಹಾಜಿ, ರಘುನಾಥ ರೇಣಕೆ, ಮಲ್ಲಿಕಾರ್ಜುನ ರಾಮದುರ್ಗ ಸೇರಿದಂತೆ ಇತರರು ಇದ್ದರು.