20 ವರ್ಷ ಬಳಿಕ ಮಂಚನಬೆಲೆ ಎಡದಂಡ ನಾಲೆಗೆ ನೀರು!

| Published : Mar 15 2025, 01:06 AM IST

20 ವರ್ಷ ಬಳಿಕ ಮಂಚನಬೆಲೆ ಎಡದಂಡ ನಾಲೆಗೆ ನೀರು!
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಹಂತವಾಗಿ ಎಡದಂಡೆ ಕಾಲುವೆಯಲ್ಲಿ 20 ಕಿ.ಮೀವರೆಗೆ ಪ್ರಾಯೋಗಿಕವಾಗಿ ಮಂಚನಬೆಲೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಗಳಿಗೆ ನೀರುಣಿಸದೆ ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಮಂಚನಬೆಲೆ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳ ದುರಸ್ಥಿ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, (ಮಾ.16) ಭಾನುವಾರ ಎಡ ದಂಡೆ ನಾಲೆಯಲ್ಲಿ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಈಗ ಎಡ ಮತ್ತು ಬಲದಂಡೆ ಕಾಲುವೆಗಳ ದುರಸ್ಥಿ ಕಾರ್ಯ ಕೆಲವೇ ಕಿಲೋ ಮೀಟರ್ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಮೊದಲ ಹಂತವಾಗಿ ಎಡದಂಡೆ ಕಾಲುವೆಯಲ್ಲಿ 20 ಕಿ.ಮೀವರೆಗೆ ಪ್ರಾಯೋಗಿಕವಾಗಿ ಮಂಚನಬೆಲೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. 10 - 15 ದಿನಗಳ ಬಳಿಕ ಬಲದಂಡೆ ಕಾಲುವೆಯಲ್ಲಿಯೂ ನೀರು ಹರಿಸಲು ನಿರ್ಧರಿಸಲಾಗಿದೆ.

20 ಕಿ.ಮೀ.ವರೆಗೆ ಹರಿಯಲಿದೆ ನೀರು:ಮಂಚನಬೆಲೆ ಜಲಾಶಯದಲ್ಲಿ ಸದ್ಯಕ್ಕೆ 1.06 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದ ಎರಡು ಗೇಟ್ ಗಳಿಂದ ತಲಾ 51 ಕ್ಯುಸೆಕ್ ನಷ್ಟು ನೀರು ಹರಿಸಲು ಅವಕಾಶವಿದೆ. ಸದ್ಯಕ್ಕೆ ಮಂಚನಬೆಲೆಯಿಂದ ಗದಗಯ್ಯನದೊಡ್ಡಿ - ಕರಡಿದೊಡ್ಡಿ - ಸುಗ್ಗನಹಳ್ಳಿ ಮಾರ್ಗವಾಗಿ ಮದರ್ ಸಾಬರ ದೊಡ್ಡಿ ಗ್ರಾಮದವರೆಗೆ ಎಡದಂಡೆ ಕಾಲುವೆಯಲ್ಲಿ ನೀರು ಹರಿಯಲಿದೆ.ಸುಮಾರು 20 ವರ್ಷಗಳ ತರುವಾಯ ಈ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಈ ಎರಡು ಕಾಲುವೆಗಳಲ್ಲಿ 20 ವರ್ಷಗಳ ಹಿಂದೆ ನೀರು ಹರಿದಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿವರೆಗೆ ನೀರನ್ನು ಹರಿಸಿಯೇ ಇರಲಿಲ್ಲ. ಹೀಗಾಗಿ ಅಚ್ಚುಕಟ್ಟು ಭಾಗದ ರೈತರು ನಾಲೆಯಲ್ಲಿ ನೀರು ಹರಿಯುವುದನ್ನು ನೋಡಲು ಕಾತುರರಾಗಿದ್ದಾರೆ.ನಾಲೆಗಳ ಸ್ಥಿತಿ ಗತಿ ಏನಾಗಿತ್ತು:ಮಂಚನಬೆಲೆ ಜಲಾಶಯದ ನೀರನ್ನು ಬಳಸಿಕೊಂಡು ರಾಮನಗರ ಹಾಗೂ ಮಾಗಡಿಗೆ ಕುಡಿಯುವ ನೀರು ಜೊತೆಗೆ ಕಾಲುವೆಗಳ ಮೂಲಕ ಕೃಷಿಗೆ ನೀರು ಸರಬರಾಜು ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಮೂಲ ಯೋಜನೆಯಂತೆ ಸುಮಾರು 52 ಕಿ.ಮೀ. ಉದ್ದದ ಎಡದಂಡೆ ಹಾಗೂ 63 ಕಿ.ಮೀ ಉದ್ದದ ಬಲದಂಡೆ ಕಾಲುವೆ ನಿರ್ಮಾಣ ಆಗಬೇಕಿತ್ತು. ಇದರಿಂದ ಕ್ರಮವಾಗಿ 1767 ಹಾಗೂ 2078 ಹೆಕ್ಟೇರ್‌ನಷ್ಟು ಕೃಷಿ ಭೂಮಿಗೆ ನೀರು ಪೂರೈಸುವ ಗುರಿ ಇತ್ತು.ಆದರೆ, ಅಗತ್ಯ ಪ್ರಮಾಣದಷ್ಟು ನೀರು ಲಭ್ಯವಾಗದು ಎಂಬ ನೆಪವೊಡ್ಡಿ ಎಡದಂಡೆ ಕಾಲುವೆಯನ್ನು 35 ಕಿ.ಮೀ ಹಾಗೂ ಬಲದಂಡೆ ಕಾಲುವೆಯನ್ನು 36 ಕಿ.ಮೀ. ಉದ್ದಕ್ಕೆ ಸೀಮಿತಗೊಳಿಸಲಾಯಿತು. ಆ ನಿರ್ಮಾಣ ಕಾಮಗಾರಿಯೂ ಸರಿಯಾಗಿ ನಡೆಯಲಿಲ್ಲ. ಪರಿಣಾಮ ಈ ಎರಡೂ ದಂಡೆಯ ಕಾಲುವೆಗಳು ಬಳಕೆಯ ಸ್ಥಿತಿಯಲ್ಲಿ ಇರಲಿಲ್ಲ.

ಕಾಲುವೆಗಳಲ್ಲಿ ಎದೆಯ ಎತರಕ್ಕೆ ಗಿಡಗಂಟೆಗಳು ಬೆಳೆದಿದ್ದರೆ, ಕೆಲವು ಕಡೆಗಳಲ್ಲಿ ಸೈಜ್ ಕಲ್ಲುಗಳನ್ನು ಕಳವು ಮಾಡಿದ್ದರು. ಬಹುತೇಕ ಕಡೆ ಕಾಲುವೆಗಳು ಒಡೆದುಹೋಗಿದ್ದವು. ನೀರು ಹರಿಸಿದರೂ ಅದು ಒಂದೆರಡು ಕಿಲೋಮೀಟರ್‌ ದಾಟಿ ಮುಂದುವರಿಯುವುದು ಅನುಮಾನ ಎಂಬಂತ ಪರಿಸ್ಥಿತಿ ಇತ್ತು.ಎಡ ಮತ್ತು ಬಲ ದಂಡೆ ನಾಲೆಗಳು ನಿರ್ಮಾಣಗೊಂಡು ದಶಕಗಳೇ ಕಳೆದು ಹೋಗಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಾಲುವೆಗಳು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದ್ದವು. ಮಗ್ಗಲಲ್ಲೇ ಜಲಾಶಯ ಇದ್ದರೂ ಜನರು ನೀರಿಗಾಗಿ ಪರದಾಡುವಂತಾಗಿತ್ತು.ಶಾಸಕರಿಂದ ನಾಲೆಗಳಿಗೆ ಕಾಯಕಲ್ಪ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮಾರ್ಗದರ್ಶನದಂತೆ ಶಾಸಕ ಇಕ್ಬಾಲ್ ಹುಸೇನ್ ರವರು ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಗೂ ನೀರು ಪೂರೈಸುವಂತೆ ಮಾಡಲು ಮುತುವರ್ಜಿ ವಹಿಸಿ ಸಾಕಷ್ಟು ಪರಿಶ್ರಮ ವಹಿಸಿದರು.ಇದೀಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಂಚನಬೆಲೆ ಜಲಾಶಯದಿಂದ ಎಡದಂಡೆ ಕಾಲುವೆಯಲ್ಲಿ ನೀರು ಹರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬರೋಬ್ಬರಿ ಎರಡು ದಶಕಗಳ ತರುವಾಯ ನೀರು ಹರಿಸುತ್ತಿರುವುದರಿಂದ ಕಾಲುವೆಗಳಿಗೆ ಮರು ಜೀವ ಬಂದಂತಾಗಿದೆ.

...ಬಾಕ್ಸ್ ....

ಮಂಚನಬೆಲೆ ಜಲಾಶಯವು ಸುಮಾರು 365 ಹೆಕ್ಟೇರ್ ನಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಒಟ್ಟು 1222 ದಶಲಕ್ಷ ಘನ ಅಡಿ (1.22 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಡೆಡ್ ಸ್ಟೋರೇಜ್ 161 ಎಂಸಿಎಫ್ ಟಿ ಹೊರತುಪಡಿಸಿದರೆ 1061 ಎಂಸಿಎಫ್ ಟಿ ವರೆಗೂ ನೀರನ್ನು ಹಿಡಿದಿಟ್ಟುಕೊಳ್ಳಬಹುದಾಗಿದೆ. ಜಲಾಶಯದಲ್ಲಿ ಸದ್ಯ 1.06 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ....ಕೋಟ್ ...

ಮಂಚನಬೆಲೆ ಜಲಾಶಯಗಳ ಬಲ ಮತ್ತು ಎಡ ದಂಡೆ ನಾಲೆಗಳ ದುರಸ್ಥಿ ಕಾರ್ಯ ಭಾಗಶಃ ಮುಗಿದಿದ್ದು, ಇದರಲ್ಲಿ ಶಾಸಕ ಬಾಲಕೃಷ್ಣರವರ ಸಹಕಾರ ಮರೆಯಲಾಗದು. ಎಡದಂಡೆ ನಾಲೆಯಲ್ಲಿ 20 ಕಿ.ಮೀ.ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದ್ದು, 15 ದಿನಗಳ ತರುವಾಯ ಬಲ ದಂಡೆಯಲ್ಲಿ ನೀರು ಹರಿಸುತ್ತೇವೆ. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ಗಾಗಿ ನಾಲೆಯನ್ನು ಮುಚ್ಚಲಾಗಿದ್ದು, ಅದನ್ನು ಸರಿಪಡಿಸಿ ರಾಮನಗರಕ್ಕೂ ನೀರು ಹರಿಸಲು ಕ್ರಮ ವಹಿಸಲಾಗುವುದು.

- ಇಕ್ಬಾಲ್ ಹುಸೇನ್ , ಶಾಸಕ----14ಕೆಆರ್ ಎಂಎನ್ 5,6,7.ಜೆಪಿಜಿ5.ಮಂಚನಬೆಲೆ ಜಲಾಶಯ6.ಜಲಾಶಯದ ಎಡದಂಡೆ ಕಾಲುವೆ ದುರಸ್ಥಿಗೊಂಡಿರುವುದು7.ಶಾಸಕ ಇಕ್ಬಾಲ್ ಹುಸೇನ್ ----