ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಅವರ ಕುಟುಂಬದ ನಡುವೆ ಬರೋಬ್ಬರಿ 30 ವರ್ಷಗಳ ಕಾದಾಟಕ್ಕೆ ಪ್ರಸಕ್ತ ಚುನಾವಣೆಯಲ್ಲಿ ಬ್ರೇಕ್ ಬಿದ್ದಿದೆ.ಎರಡೂ ಕುಟುಂಬಗಳ ನಡುವೆ ಸುದೀರ್ಘ ಹೋರಾಟ ನಡೆದಿದೆ. ಕೊಪ್ಪಳ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಇಷ್ಟು ಸುದೀರ್ಘ ಹೋರಾಟ ನಡೆದ ಬೇರೆ ಉದಾಹರಣೆಗಳಿಲ್ಲ.
1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸಂಗಣ್ಣ ಕರಡಿ ಸ್ಪರ್ಧೆ ಮಾಡುವ ಮೂಲಕ, ಅವರು ಹಾಗೂ ಮಾಜಿ ಶಾಸಕ ಬಸವರಾಜ ಹಿಟ್ನಾಳ ನಡುವೆ ಸೆಣಸಾಟ ಶುರುವಾಯಿತು. ಅಲ್ಲಿಂದ ಇಲ್ಲಿಯವರೆಗೂ ನಡೆದ 8 ವಿಧಾನಸಭಾ ಚುನಾವಣೆ ಮತ್ತು 2 ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಕಾದಾಟ ನಡೆದಿದೆ.ಯಾವ್ಯಾವ ಹೋರಾಟ?: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಸ್ಪರ್ಧೆ ಮಾಡಿದರೆ, ಕೆ. ಬಸವರಾಜ ಹಿಟ್ನಾಳ ಬಂಗಾರಪ್ಪ ಅವರು ಸ್ಥಾಪಿಸಿದ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಕರಡಿ ಜಯ ಸಾಧಿಸಿದರು. 1999ರಲ್ಲಿ ಸಂಗಣ್ಣ ಕರಡಿ ಜೆಡಿಯು ದಿಂದ ಸ್ಪರ್ಧೆ ಮಾಡಿ ಜಯ ಸಾಧಿಸಿದರೆ, ಕೆ. ಬಸವರಾಜ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. 2004ರಲ್ಲಿ ಸಂಗಣ್ಣ ಕರಡಿ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿ, ಪರಾಭವಗೊಂಡರೆ ಕೆ. ಬಸವರಾಜ ಹಿಟ್ನಾಳ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಜಯ ಸಾಧಿಸಿದರು. 2008ರಲ್ಲಿ ಸಂಗಣ್ಣ ಕರಡಿ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಜಯ ಸಾಧಿಸಿದರೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಹಿಟ್ನಾಳ ಪರಾಭವಗೊಂಡಿದ್ದರು. ಇದಾದ ಮೇಲೆ ಸಂಗಣ್ಣ ಕರಡಿ ಅವರು ಆಪರೇಶನ್ ಕಮಲಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದರು. ಆಗಲೂ ಕೆ. ಬಸವರಾಜ ಹಿಟ್ನಾಳ ಅವರೇ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು.
2013ರಲ್ಲಿ ನಡೆದ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರು ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಿದರು. ಆದರೆ, ಕೆ. ಬಸವರಾಜ ಹಿಟ್ನಾಳ ಅವರ ಪುತ್ರ ರಾಘವೇಂದ್ರ ಹಿಟ್ನಾಳ ಅವರು ಸ್ಪರ್ಧೆ ಮಾಡಿ ಜಯ ಸಾಧಿಸುವ ಮೂಲಕ ಅಪ್ಪನ ಸೋಲಿನ ಸೇಡು ತೀರಿಸಿಕೊಂಡರು.ಇದಾದ ಮೇಲೆ ಸಂಗಣ್ಣ ಕರಡಿ ಅವರು 2014ರಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಬಸವರಾಜ ಹಿಟ್ನಾಳ ಅವರನ್ನು ಸೋಲಿಸಿದರು. ಈ ಮಧ್ಯೆ 2018ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಠಕ್ಕೆ ಬಿದ್ದು ಪುತ್ರ ಅಮರೇಶ ಕರಡಿ ಅವರಿಗೆ ಟಿಕೆಟ್ ಪಡೆದರಾದರೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ರಾಘವೇಂದ್ರ ಹಿಟ್ನಾಳ ಅವರಿಂದ ಸೋಲುವಂತಾಯಿತು.
ಇದಾದ ಮೇಲೆ 2023ರಲ್ಲಿ ನಡೆದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಟಿಕೆಟ್‌ಗಾಗಿ ಫೈಟ್ ನಡೆಸಿ ಸೊಸೆ ಮಂಜುಳಾ ಕರಡಿ ಅವರನ್ನು ಅಖಾಡಕ್ಕೆ ಇಳಿಸಿದರು. ಆದರೆ ಶಾಸಕ ರಾಘವೇಂದ್ರ ಹಿಟ್ನಾಳ ದಾಖಲೆ ಗೆಲುವಿನೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದರು ಮತ್ತು ಕರಡಿ ಕುಟುಂಬ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಸೋಲುಣ್ಣವಂತಾಯಿತು.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಚುನಾವಣೆಯಲ್ಲಿ ಕರಡಿ ಮತ್ತು ಹಿಟ್ನಾಳ ಕುಟುಂಬ ಪರಸ್ಪರ ಸೆಣಸಾಡಿದ್ದು, ಅದರಲ್ಲಿ ನಾಲ್ಕು ಚುನಾವಣೆಯಲ್ಲಿ ಸಂಗಣ್ಣ ಕರಡಿ ಜಯ ಸಾಧಿಸಿದ್ದರೆ, ಒಂದರಲ್ಲಿ ಕೆ. ಬಸವರಾಜ ಹಿಟ್ನಾಳ ಹಾಗೂ 3 ಬಾರಿ ರಾಘವೇಂದ್ರ ಹಿಟ್ನಾಳ ಅವರು ಗೆಲುವು ಸಾಧಿಸಿದ್ದಾರೆ.ಕರಡಿ ಕುಟುಂಬ 30 ವರ್ಷಗಳ ಬಳಿಕ ಚುನಾವಣೆ ಅಖಾಡದಿಂದ ದೂರ ಉಳಿದಿದೆ. ಆದರೆ, ಹಿಟ್ನಾಳ ಕುಟುಂಬ ತಮ್ಮ ಹೋರಾಟ ಮುಂದುವರಿಸಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಗಣ್ಣ ಕರಡಿ ಅವರಿಗೆ ಕೈ ತಪ್ಪಿದ್ದರಿಂದ ಈಗ ರಾಜಶೇಖರ ಹಿಟ್ನಾಳ ಹಾಗೂ ಬಿಜೆಪಿಯ ಡಾ. ಬಸವರಾಜ ಅವರ ನಡುವೆ ಫೈಟ್ ನಡೆದಿದೆ.