ಸಾಹಿತ್ಯದ ಗುಂಪು ಕಟ್ಟಿಕೊಂಡು ರಾಜಕೀಯ ಸಲ್ಲ

| Published : Jul 29 2024, 12:47 AM IST

ಸಾರಾಂಶ

ಸಂಘಟನೆ ಕೇವಲ ಹೋರಾಟವಾಗಬಾರದು. ಮುಂದಿನ ಪೀಳಿಗೆಗೆ ಅನುಕೂಲ ವಾತಾವರಣ ಸೃಷ್ಟಿಸುವ ಕಾರ್ಯಗಳು ಸಂಘಟನೆಗಳು ಮಾಡಬೇಕಿದೆ.

ಧಾರವಾಡ:

ಸಾಹಿತ್ಯ ಕ್ಷೇತ್ರಕ್ಕೆ ಯುವಪೀಳಿಗೆ ಹೆಚ್ಚು ಬರಬೇಕು. ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯವೂ ಆಗಬೇಕು. ಆದರೆ, ಪ್ರಸ್ತುತ ಸಾಹಿತ್ಯದ ಒಂದು ಗುಂಪನ್ನು ಕಟ್ಟಿಕೊಂಡು ಕೆಲವರು ಸೀಮಿತವಾಗಿ ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ ಎಂದು ವಕೀಲ ಪ್ರಕಾಶ ಉಡಿಕೇರಿ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಜಂಟಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಶಿಕ್ಷಕ, ಸಾಹಿತಿ ನಾರಾಯಣ ಭಜಂತ್ರಿ ಅವರ ಸಾಹಿತ್ಯಾವಲೋಕನಕ್ಕೆ ಚಾಲನೆ ನೀಡಿದ ಅವರು, ಬರಹಗಾರರ ಸಂದೇಶ, ಚಿಂತನೆಗಳು ಸಮಾಜಕ್ಕೆ ತಲುಪುವ ಕೆಲಸವಾಗಬೇಕಿದೆ. ಪೂರಕವಾಗಿ ಭಜಂತ್ರಿ ಅವರ ಈ ಕಾರ್ಯಕ್ರಮ ತುರ್ತು ಮತ್ತು ಅರ್ಥಪೂರ್ಣ ಎಂದರು.

ಬರೆಯುವ ಮನಸ್ಸು ಮತ್ತು ಸಹಜತೆ ಇದ್ದರೆ ಸಾಕು ಅವನೊಬ್ಬ ಉತ್ತಮ ಬರಹಗಾರನಾಗಲು ಸಾಧ್ಯ ಎನ್ನುವುದಕ್ಕೆ ಶಿಕ್ಷಕ ಭಜಂತ್ರಿ ಉದಾಹರಣೆ. ಇಂತಹ ಯುವ ಬರಗಾರರಿಗೆ ಹಿರಿಯ ಸಾಹಿತಿಗಳ ಪ್ರೋತ್ಸಾಹ, ಮಾರ್ಗದರ್ಶನ ಅವಶ್ಯವಿದೆ ಎಂದರು.

ನಾರಾಯಣ ಭಜಂತ್ರಿಯವರ ಸಂಘಟನೆ ಮತ್ತು ಬದುಕಿನ ಕುರಿತು ಸಾಹಿತಿ ಶ್ರೀಧರ ಗಸ್ತಿ, ಸಂಘಟನೆ ಕೇವಲ ಹೋರಾಟವಾಗಬಾರದು. ಮುಂದಿನ ಪೀಳಿಗೆಗೆ ಅನುಕೂಲ ವಾತಾವರಣ ಸೃಷ್ಟಿಸುವ ಕಾರ್ಯಗಳು ಸಂಘಟನೆಗಳು ಮಾಡಬೇಕಿದೆ ಎಂದು ಹೇಳಿದರು.

ಭಜಂತ್ರಿಯವರ ಕಾವ್ಯಗಳ ಕುರಿತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಪ್ರಭಾಕರ ಲಗಮಣ್ಣವರ ಮಾತನಾಡಿದರು. ಅವರ ಬದುಕು ಬರಹದ ಕುರಿತು ಹಾಸ್ಯಕಲಾವಿದ ಮಲ್ಲಪ್ಪ ಹೊಂಗಲ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ, ಸಾಹಿತಿ ನಾರಾಯಣ ಭಜಂತ್ರಿ ವೇದಿಕೆ ಮೇಲಿದ್ದರು. ಶಿಕ್ಷಕಿ ಭಾರತಿ ರಂಗಪ್ಪನವರ ಅವರಿಂದ ಭರತನಾಟ್ಯ ನಡೆಯಿತು. ನಂತರ ವಿವಿಧ ಶಾಲೆಗಳ ಶಿಕ್ಷಕರಾದ ರಮೇಶ ತಳವಾರ, ಲಿಂಗರಾಜ ಅರ್ಕಸಾಲಿ, ಪ್ರಮೋದ ವಾದಿರಾಜ, ಆರ್.ವಿ. ಸಂಕಣ್ಣವರ, ಆರ್.ಎ. ಪುಲ್ಲಿ, ಎಸ್.ಎನ್. ಕೋಷ್ಟಿ, ಆರ್.ಎಸ್.ರೂಗಿ, ಈಶ್ವರ ಉದಮೇಶಿ ಅವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕ ಮಾತನಾಡಿದರು. ಉಮಾದೇವಿ ಬಾಗಲಕೋಟ ಪ್ರಾರ್ಥಿಸಿದರು. ಪ್ರೇಮಾನಂದ ಶಿಂಧೆ ನಿರೂಪಿಸಿದರು.