ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

| Published : Jul 29 2024, 12:47 AM IST

ಸಾರಾಂಶ

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಖಾಲಿ ಚೊಂಬು ಪ್ರದರ್ಶನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಶೂನನ್ಯ ಕೊಡುಗೆ ನೀಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಿ ಮಹಾವೀರ ವೃತ್ತದಲ್ಲಿ ಖಾಲಿ ಚೊಂಬು ಪ್ರದರ್ಶನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಯಾವುದೇ ನೂತನ ಕೇಂದ್ರಿಯ ಯೋಜನೆಗಳಾಗಲಿ, ನೀರಾವರಿ ಯೋಜನೆಯಾಗಲಿ ಅಥವಾ ಹೊಸ ಅನುದಾನವಾಗಲಿ ರಸ್ತೆ ಅಭಿವೃದ್ಧಿಯಾಗಲಿ, ಅತಿವೃಷ್ಠಿ, ಅನಾವೃಷ್ಠಿಗಳಿಗೆ ಸ್ಪಂದನೆಯಾಗಲಿ ಇಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ರಾಜ್ಯದಿಂದ ಬಿಜೆಪಿ ಜೆಡಿಎಸ್‌ನ 19 ಸಂಸದರು ಆಯ್ಕೆಯಾಗಿದ್ದಾರೆ. ಅವರು ಯಾರು ರಾಜ್ಯದ ಪರವಾಗಿ ಮಾತನಾಡಲೇ ಇಲ್ಲ. ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದಾರೆ. ಅದರಲ್ಲಿ 5 ಜನ ಕೇಂದ್ರ ಮಂತ್ರಿಗಳು ಇದ್ದಾರೆ. ಅವರು ಕೂಡ ಏನೂ ಕೆಲಸ ಮಾಡಿಲ್ಲ. ಬಹುದೊಡ್ಡ ಅನ್ಯಾಯ ರಾಜ್ಯಕ್ಕೆ ಆಗಿದೆ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿಯೇ ₹5300 ಕೋಟಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ಈ ಬಾರಿ ಹಣ ಕೊಟ್ಟಿಲ್ಲ ಮತ್ತು ಬಜೆಟ್‌ನಲ್ಲಿಯೂ ಈ ವಿಷಯ ಪ್ರಸ್ತಾಪಿಸಿಲ್ಲ. ಇದು ರಾಜ್ಯಕ್ಕೆ ಮಾಡಿದ ಬಹುದೊಡ್ಡ ಅನ್ಯಾಯವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು, ಬಹುದೊಡ್ಡ ಮೊತ್ತವನ್ನು ಕೇಂದ್ರದಿಂದ ಬಜೆಟ್‌ನಲ್ಲಿ ತರುತ್ತೇವೆ ಎಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರ ಕೊಟ್ಟಿರುವುದು ಖಾಲಿ ಚೊಂಬು ಅಷ್ಟೇ ಎಂದು ತಿಳಿಸಿದರು.

ರಾಜ್ಯದ ಪಾಲಿನ ಜಿಎಸ್‌ಟಿ ಹಣ ಕೂಡ ನೀಡಲಿಲ್ಲ. ಈ ಬಗ್ಗೆ ದೆಹಲಿಯಲ್ಲಿ ರಾಜ್ಯ ಸರ್ಕಾರದ ನಾಯಕರು ಪ್ರತಿಭಟನೆ ಮಾಡಿದರು. ಸುಪ್ರೀಂ ಕೋರ್ಟ್ ಸಹ ಕೇಂದ್ರಕ್ಕೆ ಚಾಟಿ ಬೀಸಿತು. ಇಷ್ಟಾದರೂ ಕೂಡ ರಾಜ್ಯಕ್ಕೆ ಕೇಂದ್ರದಿಂದ ಖಾಲಿ ಚೊಂಬು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆಯನೂರು ಮಂಜುನಾಥ್, ಎನ್.ರಮೇಶ್, ಎಚ್.ಎಸ್. ಸುಂದರೇಶ್, ಆರ್.ಎಂ. ಮಂಜುನಾಥಗೌಡ, ಎಸ್.ಕೆ. ಮರಿಯಪ್ಪ, ಎಚ್.ಸಿ.ಯೋಗೀಶ್, ಎಸ್.ಪಿ.ಶೇಷಾದ್ರಿ, ರೇಖಾ ರಂಗನಾಥ್, ಜಿ.ಡಿ.ಮಂಜುನಾಥ್, ಶರತ್ ಮರಿಯಪ್ಪ, ಗಿರೀಶ್, ನೇತ್ರಾವತಿ, ರಮೇಶ್ ಹೆಗಡೆ, ಕೆ.ರಂಗನಾಥ್ , ವಿಜಯ್‌ಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಇದ್ದರು.