ಸಾರಾಂಶ
ಬಾಳೆಹೊನ್ನೂರು : ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆ ಹಾಗೂ ಗಾಳಿ ಅಬ್ಬರ ಭಾನುವಾರದ ವೇಳೆಗೆ ಕ್ಷೀಣಗೊಂಡಿದೆ. ಆದರೆ ವಿವಿಧ ಕಡೆಗಳಲ್ಲಿ ಹಾನಿಯಂತೂ ಎಗ್ಗಿಲ್ಲದೆ ಮುಂದುವರಿದಿದೆ.ಖಾಂಡ್ಯ ಹೋಬಳಿ ವಿವಿಧೆಡೆ ಹಾನಿ ಮುಂದುವರಿದಿದ್ದು, ಬಿದರೆ ಗ್ರಾಮದ ರತ್ನ ಬೋಬಯ್ಯ ಅವರ ಮನೆ ಧಾರಾಕಾರ ಮಳೆಗೆ ಕುಸಿದಿದೆ.
ಇದೇ ಗ್ರಾಮದ ಶಕುಂತಲಾ ಮಂಜಪ್ಪಗೌಡ ಅವರ ಮನೆ ಮೇಲ್ಛಾವಣಿಗೆ ಮೇಲೆ ಭಾರೀ ಗಾತ್ರದ ಮರ ಉರುಳಿ ಹಾನಿಯಾಗಿದೆ.ಬಿದರೆ ಗ್ರಾಪಂ ವ್ಯಾಪ್ತಿಯ ಗುಂಡಿಹೊಂಬಳ- ಬಿದರೆ ಸಂಪರ್ಕ ರಸ್ತೆ ಹಾಗೂ ಬಿದರೆ ಗ್ರಾಮದ ಮುಖ್ಯರಸ್ತೆಗೆ ಮರ ಬಿದ್ದು, ಸಂಪರ್ಕ ಕಡಿತಗೊಂಡಿದ್ದು, ಸ್ಥಳಕ್ಕೆ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸದಸ್ಯರು ಭೇಟಿ ನೀಡಿ ಮರ ತೆರವುಗೊಳಿಸಿದ್ದಾರೆ.
ಬಿದರೆ ಗ್ರಾಮದ ಚಂದ್ರವಳ್ಳಿ ಸಮೀಪದ ಕಿರು ಸೇತುವೆಯಲ್ಲಿ ಧಾರಾಕಾರ ಮಳೆಗೆ ನೀರು ಸರಾಗವಾಗಿ ಹರಿಯದೆ ಕಸ ಕಡ್ಡಿಗಳು ತುಂಬಿ ಕಟ್ಟಿಕೊಂಡಿದ್ದು ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಸ್ಥಳಕ್ಕೆ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತೆರಳಿ ಸೇತುವೆಯಲ್ಲಿ ಕಟ್ಟಿಕೊಂಡಿದ್ದ ಕಸಕಡ್ಡಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಅರಳೀಕೊಪ್ಪ ಗ್ರಾಮದಲ್ಲಿ ಸುಮಾರು 20 ವಿದ್ಯುತ್ ಕಂಬಗಳು ಶನಿವಾರ ಬೀಸಿದ ಭಾರೀ ಗಾಳಿಗೆ ಧರೆಗುರುಳಿದ್ದು, ಗ್ರಾಮದ ವಿದ್ಯುತ್ ಸಂಪರ್ಕ ಕಡಿತವಾಗಿದೆ.ಕಳೆದ 2-3 ದಿನಗಳ ಹಿಂದೆ ರಂಭಾಪುರಿ ಪೀಠ, ಮಸೀದಿಕೆರೆ ವ್ಯಾಪ್ತಿಯಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ವಿದ್ಯುತ್ ಗುತ್ತಿಗೆ ದಾರರ ಮುಷ್ಕರದಿಂದ ಸರಿಪಡಿಸಿಲ್ಲ. ಇದರಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮುಂದುವರಿದಿದೆ.
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯ ಗ್ರಾಪಂನವರು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರಂಭಾಪುರಿ ಪೀಠ, ಮಸೀದಿಕೆರೆ ಭಾಗದಲ್ಲಿ ಬಿದ್ದಿರುವ ಕಂಬ ಹಾಗೂ ಲೈನ್ ಅನ್ನು ದುರಸ್ತಿಪಡಿಸುವ ಕಾರ್ಯ ಸೋಮವಾರ ಬೆಳಗ್ಗಿನಿಂದ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದು, 2 ದಿನದೊಳಗೆ ಈ ಭಾಗದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ಮೆಸ್ಕಾಂ ಜೆಇ ಗಣೇಶ್ ಪತ್ರಿಕೆಗೆ ತಿಳಿಸಿದ್ದಾರೆ. (ಬಾಕ್ಸ್)
ಉಕ್ಕಡದಲ್ಲಿ ತೆರಳಿ ವಿದ್ಯುತ್ ಲೈನ್ ದುರಸ್ತಿ:ಕಳೆದ 3-4 ದಿನಗಳ ಹಿಂದೆ ಹುಯಿಗೆರೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‌ಮೆನ್ ಒಬ್ಬರು ಹೊಳೆಯಲ್ಲಿ ಈಜಿ ವಿದ್ಯುತ್ ವೈರ್ ಜೋಡಿಸಿದ ಘಟನೆ ಮರೆಯುವ ಮುನ್ನವೇ ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಗಡಿಗೇಶ್ವರದಲ್ಲಿ ತುಂಬಿ ಹರಿಯುವ ಭದ್ರಾನದಿಯಲ್ಲಿ ಉಕ್ಕಡದಲ್ಲಿ ತೆರಳಿ ವಿದ್ಯುತ್ ಲೈನ್ ದುರಸ್ತಿಪಡಿಸಿದ ಘಟನೆ ಶನಿವಾರ ನಡೆದಿದೆ.
ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಗಡಿಗೇಶ್ವರ ಫೀಡರ್‌ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಆ ವ್ಯಾಪ್ತಿಯ ಫೀಡರ್‌ನ ವಿದ್ಯುತ್ ಲೈನ್ ಭದ್ರಾನದಿಯ ಮತ್ತೊಂದು ದಡದಲ್ಲಿ ತುಂಡಾಗಿತ್ತು. ಇದನ್ನು ಸರಿಪಡಿಸಲು ಹೊಳೆ ದಾಟಿಯೇ ತೆರಳಬೇಕಿತ್ತು. ಅಧಿಕ ಮಳೆ ಯಿಂದಹೊಳೆ ದಾಟಲು ಸಮಸ್ಯೆಯಾದ ಕಾರಣ ಬಾಳೆಹೊನ್ನೂರು ಮೆಸ್ಕಾಂ ಜೆಇ ಗಣೇಶ್, ಲೈನ್‌ಮೆನ್ ಕಾಂತರಾಜು, ಶಿವಕುಮಾರ್ ಉಕ್ಕಡದ ಮೂಲಕ ಭದ್ರಾನದಿ ದಾಟಿ ಫೀಡರ್ ಅನ್ನು ದುರಸ್ತಿ ಪಡಿಸಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿದ್ದರೂ ವಿದ್ಯುತ್ ಸಂಪರ್ಕಕ್ಕಾಗಿ ಶ್ರಮಿಸಿದ ಮೆಸ್ಕಾಂ ಸಿಬ್ಬಂದಿ ಶ್ರಮವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ೨೮ಬಿಹೆಚ್‌ಆರ್ ೧:
ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಮದ ರತ್ನ ಬೋಬಯ್ಯ ಎಂಬುವರ ಮನೆ ಧಾರಾಕಾರ ಮಳೆಗೆ ಕುಸಿದು ಹಾನಿಯಾಗಿದೆ. ೨೮ಬಿಹೆಚ್‌ಆರ್ ೨:
ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಪಂನ ಚಂದ್ರವಳ್ಳಿ ಸೇತುವೆಯಲ್ಲಿ ಕಟ್ಟಿಕೊಂಡಿದ್ದ ಕಸ ಕಡ್ಡಿಗಳನ್ನು ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಸ್ವಚ್ಛಗೊಳಿಸಿದರು