ಮತ್ತೆ ಶಿವಸೇನೆ ಪುಂಡರಿಂದ ಗೂಂಡಾಗಿರಿ

| Published : Feb 23 2025, 12:32 AM IST

ಸಾರಾಂಶ

ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾಷಾಂಧ ಶಿವಸೇನೆ (ಠಾಕರೆ ಬಣ) ಪುಂಡರು ಶನಿವಾರ ಪುಂಡಾಟಿಕೆ ನಡೆಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾಷಾಂಧ ಶಿವಸೇನೆ (ಠಾಕರೆ ಬಣ) ಪುಂಡರು ಶನಿವಾರ ಪುಂಡಾಟಿಕೆ ನಡೆಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.

ಕೊಲ್ಲಾಪುರ ಬಸ್‌ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಪ್ಪು ಮಸಿ ಬಳೆದಿದ್ದಾರೆ. ಅಲ್ಲದೇ, ಭಗವಾ ಧ್ವಜಗಳನ್ನು ಕಟ್ಟಿ, ಕರ್ನಾಟಕ ಬಸ್‌ಗಳ ಸಂಚಾರಕ್ಕೆ ಅಡ್ಡಿಪಡಿಸಿ, ಉದ್ಧಟತನ ಪ್ರದರ್ಶಿಸಿದರು. ಇತ್ತ ಬೆಳಗಾವಿಯಲ್ಲಿ ನಗರ ಸಾರಿಗೆ ಬಸ್‌ ನಿರ್ವಾಹಕನ ಮೇಲೆ ಮರಾಠಿ ಯುವಕರ ಗುಂಪು ಹಲ್ಲೆ ನಡೆಸಿರುವುದನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಅತ್ತ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟಿಕೆ ನಡೆಸಿದೆ. ಇದರಿಂದಾಗಿ ಕರ್ನಾಟಕ- ಮಹಾರಾಷ್ಟ್ರ ಉಭಯರಾಜ್ಯಗಳ ಗಡಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ಬಸ್‌ಗಳ ಸಂಚಾರಕ್ಕೂ ಅಡೆತಡೆ ಉಂಟಾಯಿತು. ಆದರೆ, ಸಂಚಾರ ಸ್ತಬ್ಧವಾಗದೇ ಎಂದಿನಂತೆಯೇ ಕರ್ನಾಟಕ ಮತ್ತು ಮಹಾರಾಷ್ಟ್ರ ಸಾರಿಗೆ ಬಸ್ಸುಗಳ ಸೇವೆಯನ್ನು ಮುಂದುವರಿಸಿವೆ.

ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ಕಪ್ಪು ಮಸಿ ಬಳಿದಿದ್ದಲ್ಲದೇ, ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು, ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಆರೋಪವನ್ನು ಶಿವಸೇನೆ ಮಾಡಿದೆ. ಶಿವಸೇನೆ ನಾಯಕ ವಿಜಯ ದೇವನೆ ನೇತೃತ್ವದಲ್ಲಿ ಶಿವಸೇನೆ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ.