ರಿಯಲ್ ಎಸ್ಟೆಟ್ ಆಗಿ ಬದಲಾಗುತ್ತಿರುವ ಕೃಷಿ ಭೂಮಿ

| Published : Mar 30 2024, 12:48 AM IST

ರಿಯಲ್ ಎಸ್ಟೆಟ್ ಆಗಿ ಬದಲಾಗುತ್ತಿರುವ ಕೃಷಿ ಭೂಮಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಹಳಷ್ಟು ಕಡೆ ಮುಂಗಾರಿನಲ್ಲಿ ಒಂದು ಬೆಳೆ ತೆಗೆದ ರೈತರು ಎರಡನೆ ಬೆಳೆಗೆ ಆಸಕ್ತಿ ವಹಿಸುತ್ತಿಲ್ಲ. ಹಿಂದೆಲ್ಲ ಹಿಂಗಾರಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದ ರೈತರಿಗೆ ಈಗ ಮನಸ್ಸಿಲ್ಲ.

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಶಿಕ್ಷಣ, ಆರೋಗ್ಯ, ಆರ್ಥಿಕ ಸಂಪನ್ಮೂಲಗಳ ಕ್ರೋಢಿಕರಣದಿಂದ ಹಿಂದುಳಿದಿರುವ ಶಿರಹಟ್ಟಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಯೂ ಕುಂಠಿತಗೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪಟ್ಟಣದ ಪೂರ್ವ, ಪಶ್ಚಿಮ,ಉತ್ತರ, ದಕ್ಷಿಣ ನಾಲ್ಕು ದಿಕ್ಕಿನೆಡೆಯೂ ಎಸ್ಟೆಟ್ ದಂಧೆ ಜೋರಾಗಿಯೇ ನಡೆದಿದೆ.

ಕಳೆದ ೩-೪ ವರ್ಷಗಳ ಹಿಂದೆ ಅತಿಯಾದ ಮಳೆಯಿಂದ ಮಣ್ಣಿನ ಮೇಲ್ಪದರದಲ್ಲಿನ ಸಾರ ಕೊಚ್ಚಿ ಹೋಗಿ ನಿಸ್ಸಾರಗೊಂಡಿರುವ ಭೂಮಿ ಒಂದೆಡೆಯಾದರೆ, ಕೃಷಿ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ, ಕಡಿಮೆ ಬೆಲೆ, ವ್ಯವಸಾಯ ವೆಚ್ಚ, ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಬರದ ಛಾಯೆಗೆ ಸಿಲುಕಿ ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಜೋಳ, ಬಿಟಿ ಹತ್ತಿ, ಶೆಂಗಾ, ಹೆಸರು, ಮೆಕ್ಕೆಜೋಳ ಇವು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ವಿಶೇಷವಾಗಿ ಜೋಳ, ಕಬ್ಬು, ಶೆಂಗಾ ಪ್ರಮುಖ ಬೆಳೆ. ಹಿಂಗಾರಿನಲ್ಲಿ ಬಿಳಿಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಜೈದರ ಹತ್ತಿ ಬೆಳೆಯುವ ಪದ್ಧತಿಯಿದೆ.

ಬಿತ್ತನೆ ಪ್ರಮಾಣ ಕಡಿಮೆ:

ತಾಲೂಕಿನ ಏಕೈಕ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಹೊರತು ಪಡಿಸಿದರೆ ಬೃಹತ್ ಅಥವಾ ಮಧ್ಯಮ ನೀರಾವರಿ ಯೋಜನೆ ತಾಲೂಕಿನಲ್ಲಿಲ್ಲ. ಈ ಏತ ನೀರಾವರಿ ಯೋಜನೆಯಿಂದ ೧.೯೮೩ ಹೆಕ್ಟೇರ್ ಪ್ರದೇಶಗಳ ಸುಮಾರು ೫ ಸಾವಿರ ಎಕರೆ ಪ್ರದೇಶದ ಮುಂಗಾರು ಬೆಳೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಅಧಿಕಾರಿಗಳ ನಿಷ್ಕಾಳಜಿಯಿಂದ ಯೋಜನೆ ಅಭಿವೃದ್ಧಿಗೆ ಕೋಟಿ ಕೋಟಿ ಹಣ ವ್ಯಯಿಸಿದರೂ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಮಾತ್ರ ದೊರೆತಿಲ್ಲ ಎಂಬ ಅಸಮಾಧಾನದ ಕೂಗು ರೈತರಿಂದ ಇಂದಿಗೂ ಕೇಳಿಬರುತ್ತಿದೆ.

ಕಸವು ಕಳೆದುಕೊಂಡ ಕೃಷಿ ಕ್ಷೇತ್ರ: ತಾಲೂಕಿನ ಬಹಳಷ್ಟು ಕಡೆ ಮುಂಗಾರಿನಲ್ಲಿ ಒಂದು ಬೆಳೆ ತೆಗೆದ ರೈತರು ಎರಡನೆ ಬೆಳೆಗೆ ಆಸಕ್ತಿ ವಹಿಸುತ್ತಿಲ್ಲ. ಹಿಂದೆಲ್ಲ ಹಿಂಗಾರಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದ ರೈತರಿಗೆ ಈಗ ಮನಸ್ಸಿಲ್ಲ. ಪಟ್ಟಣಕ್ಕೆ ಸಮೀಪವಿರುವ ಕೃಷಿ ಭೂಮಿಗಳು ರಿಯಲ್ ಎಸ್ಟೇಟ್‌ಗಳಾಗಿ ಬದಲಾಗುತ್ತಿವೆ. ನಗರ ಪ್ರದೇಶಗಳಿಂದ ಭೂಮಿ ಖರೀದಿಸಲು ಶ್ರೀಮಂತರು ದುಂಬಾಲು ಬೀಳುತ್ತಿದ್ದಾರೆ. ಪಟ್ಟಣದಲ್ಲಿ ಬರೀ ಭೂಮಿ ಮಾರುವ ಮಾತೇ ಕೇಳಿಬರುತ್ತಿದೆ.

ಕೃಷಿ ಇಲಾಖೆಯಿಂದ ನೆರವು: ಬ್ಯಾಂಕ್ ಸಾಲ ಪಡೆದು ಕೃಷಿ ಮಾಡುವ ಉತ್ಸಾಹ ಯಾವ ರೈತರಿಗೂ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ಕೃಷಿಗೆ ಹೆಸರಾಗಿದ್ದ ತಾಲೂಕಿನ ಭೂಮಿಗಳು ಈಗ ಕಸವು ಕಳೆದುಕೊಂಡಿವೆ. ಕೃಷಿ ಇಲಾಖೆಯು ಭೂ ಚೇತನ ಯೋಜನೆಯಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಲಘು ಪೌಷ್ಟಿಕಾಂಶ ಪೂರೈಕೆ, ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳ ಸೌಲಭ್ಯ ನೀಡಿದರೂ ಕೃಷಿ ಅಭಿವೃದ್ದಿಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಯೋಜಿತ ಪ್ರಯತ್ನಗಳು ಕಾಣುತ್ತಿಲ್ಲ. ತಾಲೂಕಿನಲ್ಲಿ ಕೃಷಿ ಕಾರ್ಯ ಉಳಿಯಬೇಕಾದರೆ ಪಟ್ಟಣದಲ್ಲಿ ಕೃಷಿ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ, ಬೆಳೆದ ಫಸಲಿಗೆ ಯೋಗ್ಯವಾದ ಬೆಲೆ ನೀಡಲು ಸರ್ಕಾರ ಮುಂದಾಗಬೇಕಿದೆ ಎಂಬುದು ಅನ್ನದಾತರ ಆಶಯ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು ೩೪ ಸಾವಿರ ಕೃಷಿ ಚಟುವಟಿಕೆ ಪ್ರದೇಶವಿದ್ದು, ಇದರಲ್ಲಿ ೪ ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ. ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗದೇ ಕಡಿಮೆ ಪ್ರಮಾಣದ ನೀರಿನಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ಬಳಕೆ ಮಾಡಿಕೊಂಡು ತೋಟಗಾರಿಕೆ ಇಲಾಖೆಯ ಬಹುವಾರ್ಷಿಕ ಬೆಳೆಗಳಾದ ಮಾವು, ಚಿಕ್ಕು, ನಿಂಬೆ, ಬಾಳೆ, ತೆಂಗು, ಅಡಕೆ ಬೆಳೆಯಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಹೇಳಿದರು.

ತಾಲೂಕಿನಲ್ಲಿ ಒಟ್ಟು ೯ ಸಾವಿರದಷ್ಟು ಸಣ್ಣ ಹಿಡುವಳಿದಾರ ರೈತರಿದ್ದು, ಭೂಮಿಯೂ ಕಡಿಮೆ. ಆದಾಯವೂ ಕಡಿಮೆ. ಬೇರೆ ಆದಾಯ ಮೂಲವಿಲ್ಲದ ಅನಾದಿ ಕಾಲದಿಂದ ಕೃಷಿ ನಂಬಿಕೊಂಡು ಬಂದ ಕುಟುಂಬಗಳು ಮಾತ್ರವೇ ಕೃಷಿ ಮಾಡುತ್ತಿವೆ. ಜೋಳ, ಶೆಂಗಾ ಹೊರತಾಗಿ ಹೆಚ್ಚು ಬೆಳೆಯುವ ಈರುಳ್ಳಿ, ತರಕಾರಿಗೆ ಬೆಲೆಯಿಲ್ಲ. ಈ ಬಾರಿ ಕಂಡು ಕೇಳರಿಯದ ಬರಗಾಲ ಛಾಯೆ ಆವರಿಸಿದ್ದರಿಂದ ಇತರೆ ಬೆಳೆಗಳು ತಕ್ಕಮಟ್ಟಿಗೆ ಬಂದಿದೆ ಎಂದು ರೈತರಾದ ತೋಟಪ್ಪ ಸೊನ್ನದ, ತಿಪ್ಪಣ್ಣ ಕೊಂಚಿಗೇರಿ ಹೇಳಿದರು.