ಫಲವತ್ತತೆ ಕಳೆದುಕೊಳ್ಳುತ್ತಿದೆ ಕೃಷಿ ‘ಭೂಮಿ’

| Published : May 30 2024, 12:53 AM IST / Updated: May 30 2024, 12:38 PM IST

ಸಾರಾಂಶ

ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆ, ಏಕ ರೀತಿಯ ಬೆಳೆ ಪದ್ಧತಿ, ತ್ಯಾಜ್ಯವನ್ನು ಸುಡುವುದು, ಕಾಂಪೋಸ್ಟ್‌ ಗೊಬ್ಬರದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆ, ಏಕ ರೀತಿಯ ಬೆಳೆ ಪದ್ಧತಿ, ತ್ಯಾಜ್ಯವನ್ನು ಸುಡುವುದು, ಕಾಂಪೋಸ್ಟ್‌ ಗೊಬ್ಬರದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿರುವುದು ಇಳುವರಿ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಫಲವತ್ತಾದ ಭೂಮಿಯಲ್ಲಿ ಶೇ.0.75 ರಿಂದ 1.5 ರವರೆಗೂ ಸಾವಯವ ಇಂಗಾಲದ ಅಂಶ ಇರಬೇಕು. 1970ರ ದಶಕದಲ್ಲಿ ರಾಜ್ಯದ ಭೂಮಿಯಲ್ಲಿ ಶೇ.1 ರಷ್ಟಿದ್ದ ಇಂಗಾಲದ ಅಂಶ ಇಂದು 0.32 ಕ್ಕೆ ಇಳಿಕೆಯಾಗಿದೆ. ಫಲವತ್ತಾದ ಭೂಮಿ ಎಂದರೆ, ಅದರಲ್ಲಿ ಶೇ.0.75 ರಿಂದ 1.5ರವರೆಗೂ ಸಾವಯವ ಇಂಗಾಲದ ಅಂಶ ಇರಬೇಕು. ಆದರೆ ರಾಜ್ಯದ ಸುಮಾರು 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇದರ ಕೊರತೆ ಕಂಡುಬಂದಿದೆ.

ಬೇಸಾಯ ಭೂಮಿಯಲ್ಲಿ ಮಣ್ಣಿನ ಜೈವಿಕ ಆರೋಗ್ಯ ಬಹಳ ಮುಖ್ಯವಾಗಿದೆ. ಭೂಮಿಯಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚಾಗಿದ್ದರೆ ತೇವವನ್ನು ಹಿಡಿದಿಟ್ಟುಕೊಳ್ಳುತ್ತದೆ. ಸೂಕ್ಷ್ಮಾಣು ಜೀವಿಗಳೂ ಹೆಚ್ಚಾಗುವುದರಿಂದ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ಆದರೆ ಅತಿಯಾದ ರಾಸಾಯನಿಕ ರಸಗೊಬ್ಬರಗಳ ಬಳಕೆಯಿಂದಾಗಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಬಹಳ ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಉತ್ಪಾದನೆ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗುತ್ತಿದೆ.

ಯಾವ್ಯಾವ ಜಿಲ್ಲೆ ಪರಿಸ್ಥಿತಿ ಏನು?:

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಗಣನೀಯವಾಗಿದೆ. ಈ ಭಾಗದಲ್ಲಿ ಅರಣ್ಯ ಪ್ರದೇಶವಿದ್ದು ಮರಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗಿಡ-ಮರಗಳ ಎಲೆಗಳು ಉದುರಿ ಗೊಬ್ಬರವಾಗಿ ಮಾರ್ಪಾಡಾಗುವುದರಿಂದ ಪರಿಸ್ಥಿತಿ ಉತ್ತಮವಾಗಿದೆ.

ಆದರೆ, ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ಕೊಪ್ಪಳ, ಕೋಲಾರ, ರಾಯಚೂರು, ಯಾದಗಿರಿ, ವಿಜಯಪುರ, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ಕೋಲಾರ ಮತ್ತಿತರ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.0.75 ಕ್ಕಿಂತಲೂ ಬಹಳಷ್ಟು ಕಡಿಮೆ ಇದೆ. ಏಕರೂಪ ಬೆಳೆ ಪದ್ಧತಿ, ನಿರಂತರ ಬೇಸಾಯ, ಕೃಷಿ ತ್ಯಾಜ್ಯ ಸುಡುವುದು ಮತ್ತಿತರ ಕಾರಣಗಳು ಇಂಗಾಲದ ಅಂಶ ಕಡಿಮೆಯಾಗಲು ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಪರಿಹಾರವೇನು?:

ಕುರಿ, ಕೋಳಿ, ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ಹಸಿರೆಲೆ ಗೊಬ್ಬರ ಉಪಯೋಗಿಸುವುದು, ಬೆಳೆ ಪದ್ಧತಿ ಪರಿವರ್ತನೆ, ಕೃಷಿ ತ್ಯಾಜ್ಯ ಸುಡದೇ ಕೊಳೆಸಿ ಗೊಬ್ಬರ ಮಾಡುವುದು ಸೇರಿದಂತೆ ಕಾಂಪೋಸ್ಟ್‌ ಗೊಬ್ಬರಕ್ಕೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಕೈಗಾರಿಕೀಕರಣ, ನಗರೀಕರಣ, ಜನಸಂಖ್ಯೆ ಹೆಚ್ಚಳದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಬೆಳೆಗಳಿಗೆ ರೋಗಬಾಧೆಯೂ ಅಧಿಕವಾಗಿದೆ. ಆದ್ದರಿಂದ ಮಣ್ಣಿನ ಫಲವತ್ತತೆ ಕಡೆ ಗಮನ ಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಗಳ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣದ ಶೇಕಡಾವಾರು

ಜಿಲ್ಲೆಕನಿಷ್ಠಗರಿಷ್ಠಸರಾಸರಿ

ಬಾಗಲಕೋಟೆ0.11.180.50

ಚಿಕ್ಕಬಳ್ಳಾಪುರ0.091.100.42

ಚಿಕ್ಕಮಗಳೂರು0.213.331.42

ಚಿತ್ರದುರ್ಗ0.092.160.61

ದಕ್ಷಿಣ ಕನ್ನಡ0.732.972.01

ರಾಯಚೂರು0.122.290.52

ಉತ್ತರ ಕನ್ನಡ0.033.512.18

ವಿಜಯಪುರ0.062.550.46

ಶಿವಮೊಗ್ಗ0.172.701.34