ಸಾರಾಂಶ
ಮೊಗುಲಪ್ಪ ಬಿ. ನಾಯಕಿನ್
ಗುರುಮಠಕಲ್: ನಕಲಿ ಬಿತ್ತನೆ ಬೀಜಗಳ ಮಾರಾಟ ಜಾಲ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬಲವಾಗಿ ಕಂಡುಬರುತ್ತಿದೆ. ಸರ್ಕಾರದಿಂದ ನಿಷೇಧಿತ ಕಂಪನಿಯೊಂದು ತೆಲಂಗಾಣ ಮೂಲದ ನಕಲಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದು, ಕೃಷಿ ಇಲಾಖೆ ಕಣ್ತಪ್ಪಿಸಿ ವ್ಯಾಪಕವಾಗಿ ಚಟುವಟಿಕೆಯಲ್ಲಿ ತೊಡಗಿದೆ. ಇಲ್ಲಿನ ಆಂಧ್ರ ಮೂಲದ ಕೆಲ ಅಂಗಡಿಗಳಿಗೆ ನಕಲಿ ಬೀಜ ಪೂರೈಸಲಾಗುತ್ತಿದೆ.
ಮೂರು ದಿನಗಳ ಹಿಂದೆ ಸಮೀಪದ ಸೈದಾಪುರದಲ್ಲಿ ಕೃಷಿ ಅಧಿಕಾರಿಗಳು ವೇದಾ ಕಂಪನಿಯ 690 ಹತ್ತಿ ಬೀಜಗಳ ಪಾಕೆಟ್ಗಳನ್ನು ಜಪ್ತಿ ಮಾಡಿದ್ದಾರೆ. ಮೇ 21 ರಂದು ನೆರೆಯ ತೆಲಂಗಾಣದ ಕೊಡಂಗಲ್ ಪೊಲೀಸರು ಮೇದಕ್ ಗ್ರಾಮಕ್ಕೆ ಸಮೀಪದ ಗುರುಮಠಕಲ್ ರೈತರ ಹತ್ತಿರ ನಕಲಿ ಹತ್ತಿ ಬೀಜಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮೇ 23ರಂದು ಕುಂಟಿಮರಿ ಚೆಕ್ ಪೋಸ್ಟ್ ಹತ್ತಿರ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲಾ ಪೊಲೀಸರು ನಕಲಿ ಹತ್ತಿ ಬೀಜ ಸಾಗಿಸುತ್ತುದ್ದವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕಳೆದ ವರ್ಷ ಗುರುಮಠಕಲ್ ತಾಲೂಕಿನ ಪುಟಪಾಕ್ ಗ್ರಾಮದ ರಸಗೊಬ್ಬರ ಅಂಗಡಿ ಮಾಲೀಕರನ್ನು ಹಾಗೂ ಎರಡು ವರ್ಷಗಳ ಹಿಂದೆ ಗುರುಮಠಕಲ್‌ನ ಇಬ್ಬರು ರಸಗೊಬ್ಬರ ಅಂಗಡಿ ಮಾಲೀಕರನ್ನು ತೆಲಂಗಾಣದ ಪೊಲೀಸರು ಇದೇ ಆರೋಪದಡಿ ಬಂಧಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರತಿ ಬಾರಿ ತೆಲಂಗಾಣ ಪೊಲೀಸರು ಇಲ್ಲಿಗೆ ಬಂದು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಿಸುತ್ತಿದ್ದಾರೆ. ಆದರೆ ನಮ್ಮ ಪೊಲೀಸರಿಗೆ ಹಾಗೂ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳಿಗೆ ನಕಲಿ ಹತ್ತಿ ಬೀಜಗಳ ಮಾರಾಟ ಮಾಡುವವರ ಜಾಲ ಪತ್ತೆ ಆಗದಿರುವುದು ಸಂಶಯ ಮೂಡಿಸಿದೆ ಅಂತಾರೆ ರೈತ ಮುಖಂಡರು.
ನಕಲಿ ಹತ್ತಿ ಬಿತ್ತನೆ ಬೀಜಗಳ ಬಗ್ಗೆ ವರದಿಗಳು ಬಂದಾಗ ಮಾತ್ರ ಎಂಬಂತೆ ಕೃಷಿ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಹತ್ತಿ ಬೀಜಗಳ ಮಾದರಿ ಸಂಗ್ರಹಿಸಿ ಪ್ರಯೋಗಲಾಯಕ್ಕೆ ಕಳುಹಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ಕೈ ತೊಳೆದು ಕೊಳ್ಳುತ್ತಿದ್ದಾರೆ. ನಂತರ ಪ್ರಯೋಗಲಾಯದ ವರದಿ ಬರುವಷ್ಟರಲ್ಲಿ ಬಿತ್ತನೆ ಬೀಜಗಳ ಸೀಜನ್ ಮುಗಿದಿರುತ್ತದೆ ಮತ್ತು ವರದಿ ನಕಲಿ ಬೀಜಗಳು ಅಲ್ಲ ಎಂದು ನೀಡಿ ಹಳ್ಳ ಹಿಡಿಯುತ್ತದೆ ಎನ್ನಲಾಗಿದೆ.
ಮಾರಾಟ ಜಾಲ ಹೀಗಿದೆ: ಕೆಲ ಅಂಗಡಿ ಮಾಲೀಕರು ನಿಗೂಢ ಸ್ಥಳದಲ್ಲಿ ಬೀಜ ಸಂಗ್ರಹಿಸಿ ದಲ್ಲಾಳಿಗಳಿಂದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಂಪನಿವೊಂದರ ಬಿಟಿ ಹತ್ತಿ ಬೀಜ ಬ್ಯಾನ್ ಆಗಿದೆ. ಆದರೂ ರೈತರನ್ನು ವಂಚಿಸುವ ದಂಧೆ ಎಗ್ಗಿಲ್ಲದೇ ನಡೆದಿದೆ.
ನಕಲಿ ಹತ್ತಿ ಬೀಜಗಳ ಮಾರಾಟಕ್ಕೂ ಅದ್ಧೂರಿ ಪ್ರಚಾರ: ಎಕರೆಗೆ 10 ರಿಂದ 20 ಕ್ವಿಂಟಲ್ ಹತ್ತಿ ಇಳುವರಿ ಬರಲಿದೆ. ಕ್ರಿಮಿನಾಶಕದ ಹೆಚ್ಚಿನ ಅಗತ್ಯವಿಲ್ಲ, ರೋಗ, ರುಜಿನಗಳು ಕಡಿಮೆ, ದೊಡ್ಡ ಕಾಯಿಗಳು ಬಿಡುತ್ತವೆ. ಇದರಿಂದ ಇಳುವರಿ ಹೆಚ್ಚು ಬರುತ್ತದೆ ಎಂದೆಲ್ಲ ಹೇಳಿ ರೈತರ ಮನವೊಲಿಸುವ ಯತ್ನ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ವಾಹನಗಳಲ್ಲಿ ಮೈಕ್ ಅಳವಡಿಸಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಅಲ್ಲದೆ ಅಂಗಡಿಗಳಲ್ಲಿ ದೊರೆಯುವುದಕ್ಕಿಂತ ಕಡಿಮೆ ದರದಲ್ಲಿ ಬೀಜ ಸಿಗುತ್ತವೆ ಎಂದೆಲ್ಲಾ ಪ್ರಚಾರ ನಡೆಸಲಾಗುತ್ತಿದೆ.
ರೈತರು ನಕಲಿ ಬೀಜಗಳಿಂದ ಜೋಕೆ: ಇಂತದ್ದೇ ಬೀಜಗಳನ್ನು ಖರೀದಿಸಿ ಈ ಹಿಂದೆ ತಾಲೂಕಿನ ಸಾಕಷ್ಟು ರೈತರು ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಮೊಳಕೆ ಬಾರದೆ ಬೆಳೆಯನ್ನು ರೈತರು ಕೆಡಿಸಿದ ನಿದರ್ಶನಗಳಿವೆ. ಕೆಲ ನಕಲಿ ಬೀಜ ಬಿತ್ತನೆ ಕಂಪನಿಗಳು ರೈತರನ್ನು ವಂಚಿಸುತ್ತಿವೆ. ಕೆಜಿಗೆ ರೂ.500 ರಿಂದ 600 ಮಾತ್ರ ಎಂದು ಪುಸಲಾಯಿಸಿ ಮಾರಾಟ ಮಾಡುವವರು ಕಾಣುವುದೇ ಇಲ್ಲ. ಆದರೆ ಅಂತಹ ಬೀಜ ಖರೀದಿಸಿದ ರೈತರು ಅತ್ತ ಹಣವು ಉಳಿಯದೆ ಇತ್ತ ಇಳುವರಿಯೂ ಬಾರದೆ ಸಂಕಷ್ಟ ಅನುಭವಿಸಿದ್ದಾರೆ.
ನಕಲಿ ಬೀಜ ಖರೀದಿಸೋದು ಯಾಕೆ?
ರೈತರು ಯಾವುದೇ ಕಾರಣಕ್ಕೂ ಅನಧಿಕೃತ ಕಂಪನಿಗಳ ಬಿತ್ತನೆ ಬೀಜ ಖರೀದಿಸಬಾರದು. ಬಿತ್ತನೆ ಬೀಜ ಖರೀದಿಸಿ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಇಳುವರಿ ಕೈ ಸೇರುವವರೆಗೆ ಪ್ಯಾಕೆಟ್ ಕಾಯ್ದಿರಿಸಿಕೊಳ್ಳಬೇಕು. ಒಂದು ವೇಳೆ ನಕಲಿಯಾಗಿದ್ದರೆ ಅಂತಹ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಮಗೆ ದಾಖಲೆ ಬೇಕಾಗುತ್ತದೆ. ಆದ್ದರಿಂದ ರೈತರು ಅಧಿಕೃತ ಅಂಗಡಿಗಳಲ್ಲಿ ಬಿತ್ತನೆ ಬೀಜ ಖರೀದಿಸುವುದು ಸೂಕ್ತ ಎಂದು ಕೃಷಿ ಅಧಿಕಾರಿಗಳು ಪ್ರಚಾರ ಮಾಡಿದರೂ ರೈತರು ನಕಲಿ ಹತ್ತಿ ಬೀಜ ಖರೀದಿಸುವುದು ನಿಂತಿಲ್ಲ.
ಇದಕ್ಕೆ ಕಾರಣ ಕಡಿಮೆ ದರ, ತ್ವರಿತ ಇಳುವರಿ ಹಾಗೂ ಹೆಚ್ಚಿನ ಬೆಳೆ ಫಲ ನೀಡುತ್ತದ ಜತೆಗೆ ರಸಗೊಬ್ಬರ ಸಿಂಪಡಿಸುವ ಗೋಜು ಇರುವುದಿಲ್ಲ ಎಂಬ ಪ್ರಚಾರಗಳಿಗೆ ಮರುಳಾಗಿರುತ್ತಾರೆ. ಅಲ್ಲದೆ, ಹಳ್ಳಿಯಲ್ಲಿ ಮಾರಾಟಗಾರರು ಹತ್ತಿ ಬೀಜಗಳನ್ನು ಬಡ್ಡಿ ಇಲ್ಲದೆ ಉದ್ರಿ ಕೊಡುವುದು ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.
1,86,297 ಹೆಕ್ಟೇರ್ ಬಿತ್ತನೆ ಗುರಿ
ಯಾದಗಿರಿ ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಹೆಚ್ಚಿನ ಆದ್ಯತೆಯಿದೆ. ಜಿಲ್ಲೆಯಲ್ಲಿ ಒಟ್ಟು 1,86,297 ಹೆಕ್ಟೇರ್ ಬಿತ್ತನೆ ಗುರಿ ಈ ಬಾರಿಯಿದೆ. ಶಹಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 38,798 ಹೆ., ಸುರಪುರದಲ್ಲಿ 36,500 ಹೆ., ಯಾದಗಿರಿಯಲ್ಲಿ 35,500 ಹೆ., ವಡಗೇರಾ 26,780 ಹೆ., ಗುರುಮಠಕಲ್ 23,700 ಹೆ., ಹಾಗೂ ಹುಣಸಗಿಯಲ್ಲಿ 25 ಸಾವಿರ ಹೆ., ಬಿತ್ತನೆ ಗುರಿ ಹೊಂದಲಾಗಿದೆ.
ತೆಲಂಗಾಣದ ಮಹಿಬೂಬ್ ನಗರ ಜಿಲ್ಲೆಯ ಬೂತ್ಪೂರ್ನಲ್ಲಿ ಉತ್ಪನ್ನ ಆಗುವ ಹತ್ತಿ ಬೀಜ ಗಳಿಗೆ ಕೆಲವು ರೈತರ ಬೇಡಿಕೆ ಇದೆ. ಇದು ತೆಲಂಗಾಣದಲ್ಲಿ ಮಾರಾಟ ನಿಷೇಧವಿದೆ. ಸೀಮಾಂಧ್ರ ಬಿಟಿ ಹತ್ತಿ ಬೀಜಗಳಿಗೂ ಡಿಮ್ಯಾಂಡ್ ಇದೆ. ಇವೆರಡೂ ಅಲ್ಲಿನ ರಾಜ್ಯಗಳಲ್ಲಿ ನಿಷೇಧವಿದೆ.