ಟೌನ್‌ಶಿಪ್‌ಗೆ ಕೃಷಿ ಭೂಮಿ ಬಿಡಲ್ಲ: ರೈತರ ಆಕ್ರೋಶ

| Published : Nov 06 2024, 01:27 AM IST

ಟೌನ್‌ಶಿಪ್‌ಗೆ ಕೃಷಿ ಭೂಮಿ ಬಿಡಲ್ಲ: ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಸರ್ಕಾರಗಳು ರೈತರಿಂದ ಬಲವಂತವಾಗಿ ಕೃಷಿ ಭೂಮಿ ಕಸಿದುಕೊಂಡು ಟೌನ್‌ಶಿಪ್ ಮಾಡಲು ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಎಚ್ಚರಿಕೆ ನೀಡಿದರು.

ಹೊಸಕೋಟೆ: ಸರ್ಕಾರಗಳು ರೈತರಿಂದ ಬಲವಂತವಾಗಿ ಕೃಷಿ ಭೂಮಿ ಕಸಿದುಕೊಂಡು ಟೌನ್‌ಶಿಪ್ ಮಾಡಲು ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಎಚ್ಚರಿಕೆ ನೀಡಿದರು.

ತಾಲೂಕಿನ ನಂದಗುಡಿ-ಸೂಲಿಬೆಲೆ ಟೌನ್‌ಶಿಪ್ ವಿರೋಧಿಸಿ ಭೂ ಸ್ವಾಧೀನ ವಿರೋಧಿ ಸಮಿತಿ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. 18 ವರ್ಷಗಳಿಂದ ದೂರ ಉಳಿದಿದ್ದ ಉಪನಗರ ನಿರ್ಮಾಣ ಯೋಜನೆಯನ್ನು ರೈತರ ಅನುಮತಿ ಇಲ್ಲದೆ ಕೈಗೆತ್ತಿಕೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸವಾಗಿದೆ. ಆದ್ದರಿಂದ ಯಾವೊಬ್ಬ ರೈತರು ಯಾವ ಅಧಿಕಾರಿಯನ್ನು ನಿಮ್ಮ ಜಮೀನಿನ ಒಳಗಡೆ ಕಾಲಿಡಲು ಬಿಡಬೇಡಿ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ರೈತರ ಹಿತಾಸಕ್ತಿ ಬಲಿ ಕೊಡುತ್ತಿದ್ದು ಹೋರಾಟದ ಹಾದಿ ತುಳಿಯಬೇಕು. ಪ್ರಸ್ತುತ ರಾಜ್ಯದಲ್ಲಿ ರೈತರ ಹಿತ ಕಾಯುವ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸುತ್ತ ಇರುವ ದುಷ್ಟಕೂಟವನ್ನು ದೂರ ಇಡಬೇಕು. ಇಲ್ಲದಿದ್ದರೆ ಬೇಗ ಅಧಿಕಾರ ಕಳೆದುಕೊಳ್ಳುತ್ತಾರೆ. ನಂದಗುಡಿ ಟೌನ್‌ಶಿಪ್ ಯೋಜನೆ ಕೈ ಬಿಟ್ಟು ನಾವು ರೈತಪರವಾಗಿದ್ದೇವೆ ಎಂಬುದನ್ನು ಸಿಎಂ ಸಾಬೀತು ಮಾಡಬೇಕು. ಇಲ್ಲವಾದರೆ ಆಮ್ ಆದ್ಮಿ ಪಾರ್ಟಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದರು.

ಶಾಶ್ವತ ನೀರಾವರಿ ಯೋಜನೆ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ನಂದಗುಡಿ ಹೋಬಳಿಯಲ್ಲಿ ಫಲವತ್ತಾದ ಕೃಷಿ ಜಮೀನಿದ್ದು ರೈತರು ಹೈನುಗಾರಿಕೆ, ಫಲ, ಪುಷ್ಪ ಬೆಳೆಯುವಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಟೌನ್‌ಶಿಪ್‌ಗೆ ಭೂಮಿ ನೀಡುವುದು ಬೇಡ ಹೋರಾಟಕ್ಕೆ ಸಿದ್ಧರಾಗಿರೋಣ ಎಂದರು.

ಇದಕ್ಕೂ ಮುನ್ನ ಭೂಸ್ವಾಧೀನ ವಿರೋಧಿ ಸಮಿತಿ ಕಚೇರಿಯಿಂದ ಗಾಂಧಿ ವೃತ್ತದವರೆಗೂ ಸುಮಾರು ೩ ಸಾವಿರಕ್ಕೂ ಹೆಚ್ಚು ರೈತರು ಕಾಲ್ನಡಿಗೆ ಜಾಥಾ ತೆರಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚಿಂತಾಮಣಿ-ಬೆಂಗಳೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ್, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ, ಸದಸ್ಯರಾದ ಮುನಿಶಾಮೇಗೌಡ, ವೆಂಕಟೇಶ್, ಧರ್ಮೇಶ್ ಸೇರಿದಂತೆ ಸಹಸ್ರಾರು ರೈತರು ಹಾಜರಿದ್ದರು.

ಬಾಕ್ಸ್.............

ರೈತರನ್ನು ಒಕ್ಕಲೆಬ್ಬಿಸಲು ಬಿಡುಲ್ಲ

2006-07ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಂದಗುಡಿ ಹೋಬಳಿಯನ್ನು ಎಸ್‌ಇಝಡ್ ಮಾಡಲು ಹೊರಟಾಗ ಅದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ಹೆಚ್.ಕೆ.ಪಾಟೀಲ್ ಪಾಲ್ಗೊಂಡು ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ನಂದಗುಡಿ ವ್ಯಾಪ್ತಿಯ 36 ಹಳ್ಳಿಗಳ 18.5 ಸಾವಿರ ಎಕರೆ ಕೃಷಿ ಭೂಮಿ ಲೂಟಿ ಮಾಡುವ ಹುನ್ನಾರ ನಡೆಸಿದೆ. ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸುತ್ತೇವೆ. ಟೌನ್‌ಶಿಪ್‌ ಮಾಡಲು ಮುಂದಾದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ತಿಳಿಸಿದರು.

ಕೋಟ್‌................

ರೈತರ ಜಮೀನನ್ನು ಉಳಿಸುವುದು ನಮ್ಮ ಕರ್ತವ್ಯ, ಮುಂದಿನ ಬೆಳಗಾವಿ ಅಧಿವೇಶನದಲ್ಲಿ ನನ್ನ ಸಹದ್ಯೋಗಿ ಶಾಸಕ ಶರತ್ ಬಚ್ಚೇಗೌಡರೊಂದಿಗೆ ಸದನದಲ್ಲಿ ಟೌನ್‌ಶಿಪ್ ಕೈ ಬಿಡುವ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಸರ್ಕಾರ ನಮ್ಮದೇ ಆದರೂ ರೈತರ ವಿಚಾರವಾಗಿ ನಾನು ಪಕ್ಷಾತೀತವಾಗಿ ಬೆಂಬಲಕ್ಕೆ ನಿಲ್ಲುತ್ತೇನೆ.

-ಬಿ.ಆರ್.ಪಾಟೀಲ್, ಆಳಂದ ಶಾಸಕ

ಫೋಟೋ : 5 ಹೆಚ್‌ಎಸ್‌ಕೆ 1, 2, 3, 4

1: ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಂದಗುಡಿ-ಸೂಲಿಬೆಲೆ ಟೌನ್‌ಶಿಪ್ ವಿರೋಧಿಸಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಸಭೆಯನ್ನು ನಿವೃತ್ತ ನ್ಯಾಯ ಮೂರ್ತಿ ಗೋಪಾಲಗೌಡ ಉದ್ಘಾಟಿಸಿದರು.

2: ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

3: ಸಹಸ್ರಾರು ಸಂಖ್ಯೆಯಲ್ಲಿ ರೈತರು ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಗಾಂಧಿ ಸರ್ಕಲ್ ಬಳಿ ಟೌನ್ ಶಿಪ್ ವಿರುದ್ದ ಪ್ರತಿಭಟನೆ ಮಾಡಿದರು.

4: ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ ರೈತರು.