ಕೃಷಿ ಸಂಶೋಧನೆ ಕೃಷಿ ವಿವಿ ಕಾಂಪೌಂಡ್‌ ಬಿಟ್ಟು ಹೊರ ಬರಲಿ!

| Published : Sep 23 2024, 01:23 AM IST

ಕೃಷಿ ಸಂಶೋಧನೆ ಕೃಷಿ ವಿವಿ ಕಾಂಪೌಂಡ್‌ ಬಿಟ್ಟು ಹೊರ ಬರಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜೊತೆಗೂಡಿ ಸಹಕಾರದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಬರೀ ವಿವಿ ಆವರಣದಲ್ಲಿಯೇ ರಾಷ್ಟ್ರಮಟ್ಟದ ಸಂಶೋಧನೆ ಮಾಡಿದರೆ ರೈತರಿಗೆ ಏನು ಒಳಿತು ಎಂದು ಲಾಡ್ ಪ್ರಶ್ನಿಸಿದರು.

ಧಾರವಾಡ: ಕೃಷಿಯಲ್ಲಿ ಹಲವು ವರ್ಷಗಳಿಂದ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳು ವೇಗವಾಗಿ ಬಳಕೆಯಾಗುತ್ತಿದ್ದರೂ ಭಾರತ ಹಾಗೂ ರಾಜ್ಯದ ಕೃಷಿ ಇಳುವರಿ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಇರುವುದು ಸೋಜಿಗದ ಸಂಗತಿ. ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳುವುದರ ಜತೆಗೆ ಕೃಷಿ ವಿವಿಯ ಸಂಶೋಧನೆಗಳು ತನ್ನ ಕಾಂಪೌಂಡ್‌ ಬಿಟ್ಟು ಹೊರ ಬರಬೇಕು ಎಂದು ರಾಜ್ಯ ಕಾರ್ಮಿಕ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕೃಷಿ ವಿಜ್ಞಾನಿಗಳಿಗೆ ಕರೆನೀಡಿದರು.

ಭಾನುವಾರ ಕೃಷಿ ವಿಶ್ವವಿದ್ಯಾಲಯದಲ್ಲಿ 24ನೇ ಸಾಲಿನ ಕೃಷಿ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಸಾಧಕ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಅವರು, ಕೃಷಿ ವಿವಿ ಹೊಸ ಸಂಶೋಧನೆಗಳು ರೈತರಿಗೆ ಅನುಕೂಲ ಆಗುವಂತೆ, ಕೃಷಿ ವಿಜ್ಞಾನಿಗಳು ರೈತರ ಕ್ಷೇತ್ರಕ್ಕೆ ತೆರಳಿ ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಕೃಷಿ ಸಮಸ್ಯೆಗಳ ಹಾಗೂ ಪರಿಹಾರಗಳ ಬಗ್ಗೆ ಜಿಲ್ಲಾಡಳಿತದ ಜತೆ ಆಗಾಗ್ಗೆ ಚರ್ಚಿಸಬೇಕು. ಕಂದಾಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜೊತೆಗೂಡಿ ಸಹಕಾರದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಬರೀ ವಿವಿ ಆವರಣದಲ್ಲಿಯೇ ರಾಷ್ಟ್ರಮಟ್ಟದ ಸಂಶೋಧನೆ ಮಾಡಿದರೆ ರೈತರಿಗೆ ಏನು ಒಳಿತು ಎಂದು ಪ್ರಶ್ನಿಸಿದರು.

ದೇಶದಲ್ಲಿ 150 ಸಾವಿರ ಮಿಲಿಯನ್ ಹೆಕ್ಟೇರ್ ಕೃಷಿ ಮಾಡಲಾಗುತ್ತಿದೆ. ಈ ಪೈಕಿ 40 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಭತ್ತ, 30 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಗೋಧಿ, 20 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ತೋಟಗಾರಿಕೆ, 12 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಈ ಬೆಳೆಗಳ ಉತ್ಪಾದನೆ, ಇಳುವರಿ ಕಡಿಮೆಯಿದೆ. ಚೀನಾದಲ್ಲಿ ಕೃಷಿ ಭೂಮಿ ಕಡಿಮೆಯಿದ್ದರೂ ನಮಗಿಂತ ಮೂರು ಪಟ್ಟು ಇಳುವರಿ ಇದೆ. ನಮ್ಮಲ್ಲಿ ಫಲವತ್ತಾದ ಭೂಮಿ, ನೀರಾವರಿ ಹಾಗೂ ಆಧುನಿಕ ತಂತ್ರಜ್ಞಾನ ಮಶಿನರಿಗಳನ್ನು ಬಳಸಿದರೂ ಇಳುವರಿ ಕಡಿಮೆ ಏಕೆ ಎಂಬುದನ್ನು ಯಾವತ್ತಾದರೂ ಧಾರವಾಡ ಕೃಷಿ ವಿವಿ ಚಿಂತನೆ ಮಾಡಿದೆಯಾ? ಅವೈಜ್ಞಾನಿಕ ಬೆಳೆವಿಮೆ ಪದ್ಧತಿ, ರೈತರ ಆತ್ಮಹತ್ಯೆ ಸಮಸ್ಯೆಗಳ ಬಗ್ಗೆ, ಮಾರುಕಟ್ಟೆ ಏರುಪೇರು ಬಗ್ಗೆ ಕೃಷಿ ವಿವಿ ಅಧ್ಯಯನ ಮಾಡಿ ವರದಿ ನೀಡಬೇಕು ಎಂದು ಸಚಿವರು ಕುಲಪತಿ ಡಾ. ಪಿ.ಎಲ್‌. ಪಾಟೀಲ ಅವರಿಗೆ ಸೂಚಿಸಿದರು.

ಕೃಷಿ ಮೇಳಕ್ಕೆ ಚಾಲನೆ ನೀಡಿದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ, ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಏನೆಲ್ಲ ಅನುದಾನ, ಮಾರ್ಗದರ್ಶನ ನೀಡಿದರೂ ರೈತರ ಆರ್ಥಿಕತೆ ಮಾತ್ರ ಸುಧಾರಿಸುತ್ತಿಲ್ಲ. ಎಷ್ಟೇ ಬೆಳೆ ಬೆಳೆದರೂ ಮಾರುಕಟ್ಟೆ ಏರುಪೇರು, ಹವಾಮಾನ ವೈಪರೀತ್ಯ, ಕೃಷಿ ಕಾರ್ಮಿಕರ ಸಮಸ್ಯೆ ರೈತರಿಗೆ ಶಾಪವಾಗಿವೆ. ಕೃಷಿ ವಿವಿ ಕೃಷಿ ಮೇಳ ಸೇರಿದಂತೆ ಏನೆಲ್ಲಾ ಮಾರ್ಗದರ್ಶನ ನೀಡಿದರೂ ರೈತರಿಗೆ ಏತಕ್ಕೆ ಅನುಕೂಲ ಆಗುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ. ಕೃಷಿ ವಿವಿ ಪ್ರಯೋಗಾಲಯದಲ್ಲಿ ಆಗಿರುವ ಸಂಶೋಧನೆ ರೈತರ ಹೊಲಗಳಲ್ಲಿ ಏತಕ್ಕೆ ಯಶಸ್ವಿಯಾಗುತ್ತಿಲ್ಲ ಎಂಬುದು ಕಳವಳದ ಸಂಗತಿ. ಇಂತಹ ಸಂದರ್ಭದಲ್ಲಿ ರೈತರನ್ನು ಹೇಗೆ ಉದ್ಧಾರ ಮಾಡಬೇಕು ಎಂಬುದೇ ದೊಡ್ಡ ಸವಾಲಾಗಿದೆ. ರೈತರ ಮಕ್ಕಳು ಕೃಷಿ ವಿಜ್ಞಾನ ಓದಿದರೂ ಕೃಷಿಕರಾಗುತ್ತಿಲ್ಲ. ಕೃಷಿ ವಿವಿ ಸಂಶೋಧನೆಗಳು ರೈತರಿಗೆ ಉಪಯೋಗವಾಗಬೇಕು. ಇಂಟಿಗ್ರೇಟೆಡ್ ಕೃಷಿಗೆ ಹೆಚ್ಚು ಹೊತ್ತು ನೀಡಬೇಕು ಎಂದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ನಿಸರ್ಗ ಬದಲಾಗುತ್ತಿದೆ. ಹವಾಮಾನ ಬದಲಾವಣೆ ಮಳೆ, ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಆಧುನಿಕ ತಂತ್ರಜ್ಞಾನದ ಪಶುಸಂಗೋಪನೆ ಕಡಿಮೆಯಾಗುತ್ತಿದೆ. ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ದೊರೆಯುತ್ತಿಲ್ಲ ಎಂದರು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಹವಾಮಾನ ವೈಪರಿತ್ಯ ನಿರ್ವಹಣೆಯಲ್ಲಿ ಕೃಷಿ ವಿಜ್ಞಾನಗಳು ರೈತರಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಹೊಸ ಹೊಸ ತಳಿಗಳು, ನೂತನ ಆವಿಷ್ಕಾರಗಳು, ತಂತ್ರಜ್ಞಾನಗಳು ಲಕ್ಷಾಂತರ ರೈತರಿಗೆ ಉಪಯೋಗವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಮೈಸೂರಿನ ಮಿನರಲ್ಸ್ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ, ಕೃಷಿ ವಿವಿಯ ಕುಲಪತಿ ಡಾ. ಪಿ.ಎಲ್. ಪಾಟೀಲ. ಜಿಲ್ಲಾಧಿಕಾರಿ ದಿವ್ಯ ಪ್ರಭು ಇದ್ದರು. ಕುಲಪತಿ ಕಿವಿ ಹಿಂಡಿದ ಲಾಡ್‌

ಕೃಷಿ ವಿವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಜಿಲ್ಲೆಯ ಒಂದು ಕ್ಷೇತ್ರ, ಹೋಬಳಿಯನ್ನು ಮಾದರಿಯಾಗಿಸಿ ಅಧ್ಯಯನ ಹಾಗೂ ಪ್ರಯೋಗ ಕೈಗೊಳ್ಳಬೇಕು. ಇಂಟಿಗ್ರೇಟೆಡ್ ಕೃಷಿ ಹಾಗೂ ಕ್ಷೇತ್ರ ಭೇಟಿಗೆ ಒತ್ತು ನೀಡಬೇಕು. ಇಷ್ಟು ವರ್ಷಗಳ ಕಾಲ ಕೃಷಿ ಮೇಳ ಮಾಡಿ ಲಕ್ಷಾಂತರ ಜನರಿಗೆ ತಾವು ಮಾರ್ಗದರ್ಶನ ಮಾಡಿದ್ದರ ಪರಿಣಾಮದ ಅಧ್ಯಯನ ಆಗಿದೆಯೇ? ತಾವು ಜಿಲ್ಲೆಯ ಕೃಷಿ ಮಾಹಿತಿ ಹೊಂದಿದ್ದೀರಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ ಪ್ರಸಂಗ ಕುಲಪತಿಗಳ ಕಿವಿ ಹಿಂಡಿದಂತಾಯಿತು.