ಸಾರಾಂಶ
- ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ವಿಸ್ತರಣಾ ತರಬೇತಿಯಲ್ಲಿ ವಿಜ್ಞಾನಿ ಎಂ.ಜಿ.ಬಸವನಗೌಡ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಭಾರತದ ಆಹಾರ ಸ್ವಾವಲಂಬನೆಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಶೋಧನಾ ಕೊಡುಗೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 96ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸ ಸಮಾರಂಭ ಅಂಗವಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಡೆದ ವಿಸ್ತರಣಾ ತರಬೇತಿಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇಶದಲ್ಲಿ 731 ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ರೈತಪರ ವಿಸ್ತರಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ರೈತರಿಗೆ ಆದಾಯದ ಮತ್ತು ಆರ್ಥಿಕತೆ ಸ್ವಾವಲಂಬನೆ ನೀಡಲು ಯಶಸ್ಸಿಯಾಗಿವೆ ಎಂದರು.ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ರೈತರಿಗೆ ಅಗತ್ಯವಾಗಿ ಬೇಕಾಗಿರುವ ತಂತ್ರಜ್ಞಾನಗಳು ಮತ್ತು ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವಲ್ಲಿ ತೋಟಗಾರಿಕೆ ಇಲಾಖೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಕಳೆದ ವರ್ಷ ಬರಗಾಲದಿಂದ ಅಡಕೆ ಬೆಳೆಯಲ್ಲಿ ಹೆಚ್ಚು ರೋಗ ಮತ್ತು ಕೀಟಗಳ ಹಾವಳಿಯನ್ನು ಕಂಡಿದ್ದೇವೆ. ಹಾಗೆಯೇ, ವಿಸ್ತೀರ್ಣ ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಸೂಕ್ತ ಅಂತರ ಬೆಳೆಗಳ ಬಗ್ಗೆ ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ, ಡಾ. ಟಿ.ಜಿ.ಅವಿನಾಶ್, ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ, ಹಾಗೂ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಹಾಯಕ ತೋಟಗಾರಿಕೆ ಅಧಿಕಾರಿಗಳು ಭಾಗವಹಿಸಿದ್ದರು.
- - - -16ಕೆಡಿವಿಜಿ41ಃ:ದಾವಣಗೆರೆಯ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿಸ್ತರಣಾ ತರಬೇತಿ ಕಾರ್ಯಕ್ರಮದಲ್ಲಿ ಎಂ.ಜಿ. ಬಸವನಗೌಡ ಮಾತನಾಡಿದರು.