ಸಾರಾಂಶ
ಕೆವಿಕೆ ಮುಖ್ಯಸ್ಥ ಡಾ.ಎನ್. ಲೋಗಾನಂದನ್ ಹೇಳಿಕೆ । ಅಮೆರಿಕಾದಂತಹ ದೇಶದಲ್ಲೂ ರೈತರ ಹಾದಿ ಆತ್ಮಹತ್ಯೆಯತ್ತ
ಕನ್ನಡಪ್ರಭ ವಾರ್ತೆ ಚಾಮರಾಜನಗರಹವಾಮಾನ ಬದಲಾವಣೆ ಸುಳಿಯಲ್ಲಿ ಕೃಷಿ ಸಿಲುಕಿದೆ ಎಂದು ತುಮಕೂರು ಹಿರೇಹಳ್ಳಿ ಕೆವಿಕೆ ಮುಖ್ಯಸ್ಥ ಡಾ.ಎನ್. ಲೋಗಾನಂದನ್ ಆತಂಕ ವ್ಯಕ್ತಪಡಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಭಾನುವಾರ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ವತಿಯಿಂದ ಕೃಷಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಹವಮಾನ ಬದಲಾವಣೆ ಹತ್ತಿಕ್ಕುವ ಉಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುವುದೊಂದೇ ಈಗಿರುವ ದಾರಿ. ಇಂದು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಹುದೊಡ್ಡ ಒತ್ತಡ ಸೃಷ್ಟಿ ಮಾಡಿಕೊಂಡಿದ್ದು, ಇದರಿಂದ ಭೂಮಿ, ನೀರು, ಗಾಳಿ, ಅರಣ್ಯ ಜೀವವೈವಿಧ್ಯ ಹಾಗೂ ಜೈವಿಕ ಸಂಪನ್ಮೂಲಗಳ ಗುಣಮಟ್ಟ ಹಾಳಾಗುತ್ತಿದೆ. ಆದ್ದರಿಂದ ಮಾನವ ಈ ಬಗ್ಗೆ ಎಚ್ಚೆತ್ತು ನಮ್ಮ ನೈಸರ್ಗಿಕ ಸಂಪನ್ಮೂಲವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಅಗತ್ಯವಿದೆ ಎಂದರು. ಇಂದು ಭೂಮಿ ತಾಪಮಾನ ಏರುತ್ತಿರುವುದು ಜ್ವಲಂತ ಸಮಸ್ಯೆಯಾಗಿದೆ. ಮಾನವ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕಲ್ಲದೆ ಅನ್ಯ ಮಾಗವಿಲ್ಲ. ಜಮೀನುಗಳಲ್ಲಿ ಮರಗಿಡಗಳನ್ನು ಹೆಚ್ಚು ಬೆಳೆಸಬೇಕು, ಮಣ್ಣು ಮತ್ತು ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.ಅಭಿವೃದ್ಧಿ ರಾಷ್ಟ್ರಗಳಲ್ಲೂ ಕೃಷಿ ಆತಂಕ :ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ರಾಷ್ಟ್ರಗಳೇ ಕೃಷಿ ಹವಾಮಾನ ವೈಪರಿತ್ಯದಲ್ಲಿ ಸಿಲುಕಿದ್ದು, ದೊಡ್ಡ ಗಂಡಾತರಕ್ಕೆ ಸಿಲುಕಿವೆ. ಕೃಷಿ ಅಸ್ತಿತ್ವಕ್ಕೆ ಧಕ್ಕೆ ಬಂದು ಅಮೆರಿಕಾದಂತಹ ದೇಶದಲ್ಲೂ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೃಷಿಯನ್ನು ಲಾಭಕ್ಕಿಂತ ಜೀವನೋಪಾಯಕ್ಕಾಗಿ ಮಾಡಿದರೆ ಮಾತ್ರ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯ. ಇಂದು ಕೃಷಿಯಲ್ಲಿ ವಾಯುಗುಣ, ಮಾರುಕಟ್ಟೆ ವೈಪರಿತ್ಯವನ್ನು ರೈತರು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ತುಮಕೂರು ಗಾಂಧೀಜಿ ಸಹಜ ಬೇಸಾಯ ಶಾಲೆಯ ಸಹಜ ಕೃಷಿ ವಿಜ್ಞಾನಿ ಡಾ.ಎಚ್. ಮಂಜುನಾಥ ಮಾತನಾಡಿ, ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಹಾದಿಗಳಲ್ಲಿ ರೈತರು ಸಹಜ ಕೃಷಿ ಮೂಲಕ ವ್ಯವಸಾಯ ಮಾಡುತ್ತಾ ರಾಗಿ ಮತ್ತು ಅವರೆ ಹಾಗೂ ಸಾಸುವೆ ಬೆಳೆಯುತ್ತಿದ್ದು, ಇಂತಹ ತಳಿಗಳನ್ನು ಉಳಿಸಿ ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಗಾರಗಳಿಗೆ ಭಾಗವಹಿಸಿ ತಜ್ಞರು ನೀಡುವ ಸಲಹೆಗಳನ್ನು ಸ್ವೀಕರಿಸಬೇಕು ಎಂದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್‌ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಕಾಡು ಇರುವುದರಿಂದ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ರೈತರು ಹಿಂದೆ ಕಡಮೆ ಬಂಡವಾಳದಲ್ಲಿ ತಮ್ಮ ಅಗತ್ಯಕ್ಕೆ ಬೇಕಾದಷ್ಟು ಬೆಳೆ ಬೆಳೆದುಕೊಳ್ಳುತ್ತಿದ್ದು, ಇಂದು ಹೆಚ್ಚಿನ ಬಂಡವಾಳ ಹಾಕಿ ವಾಣಿಜ್ಯ ಬೆಳೆಗಳನ್ನು ಬೆಳೆದು ಹೊರ ರಾಜ್ಯಗಳಿಗೂ ಕಳುಹಿಸುತ್ತಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲೂ ರೈತರು ಬಾಳೆ, ಕಬ್ಬು ಮತ್ತು ಮುಸುಕಿನ ಜೋಳ ಬೆಳೆಯುತ್ತಿದ್ದು, ಕಾಡಂಚಿನಲ್ಲಿ ಕಂದಕ ನಿರ್ಮಾಣ ಮತ್ತು ರೈಲ್ವೆ ಕಂಬಿ ಅಳವಡಿಸುವ ಮೂಲಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಹೋಗದಂತೆ ತಡೆಗಟ್ಟಲಾಗುತ್ತಿದೆ. ಆದರೂ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ತಪ್ಪಿಲ್ಲ, ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ಮುಂದುವರಿದಿದೆ ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀದ್, ಉಪನಿರ್ದೇಶಕಿ ಸುಷ್ಮಾ, ಕೆವಿಕೆ ಮುಖ್ಯಸ್ಧ ಡಾ. ಜಿ.ಎಸ್. ಯೋಗೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ಚಿತ್ರ ನಟ ಕಿಶೋರ್ ಪತ್ನಿ ವಿಶಾಲಾಕ್ಷಿ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಮೈಸೂರಿನ ಕರುಣಾಕರನ್, ಸುಶಿ ಸಂಸ್ಧೆಯ ಸ್ವಾಮಿ, ನಿವೃತ್ತ ಅಧಿಕಾರಿಗಳಾದ ಡಾ. ಹನುಮಯ್ಯ,ಡಾ. ಅಜ್ಮಲ್‌ಪಾಷ, ಸಹಜ ಕೃಷಿಕ ಪ್ರಶಾಂತ್ ಜಯರಾಂ, ನಿಸರ್ಗ, ಇದ್ದರು.