ಸಾರಾಂಶ
ಶಿರಸಿ: ಭಾರತ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾಲಂಬಿಯಾಗಿಲ್ಲ. ಕೇವಲ ಆಹಾರ ಧಾನ್ಯ ಉತ್ಪಾದನೆಯಲ್ಲಿ ಮಾತ್ರ ಸ್ವಾವಲಂಬಿಯಾಗಿದ್ದೇವೆ. ಕೃಷಿ ಹಾಗೂ ಆಹಾರವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಆಹಾರದ ಕುರಿತು ಮಾ ಇಂಟಿಗ್ರೇಟರ್ಸ್ ಸಂಸ್ಥೆಯ ಸ್ಥಾಪಕ ಕೆ.ಎಸ್. ಅಶೋಕಕುಮಾರ ಹೇಳಿದರು.
ಅವರು ಶನಿವಾರ ನಗರದ ಅರಣ್ಯ ಸಮುದಾಯ ಭವನದಲ್ಲಿ ಹಿರಿಯ ಚಿಂತಕ, ಸಹಕಾರಿ ಸಾಧಕರಾಗಿದ್ದ ಡಾ. ವಿ.ಎಸ್. ಸೋಂದೆ ಅವರ ಸ್ಮರಣಾರ್ಥ ಶಿರಸಿ ಅರ್ಬನ್ ಬ್ಯಾಂಕ್ ಹಾಗೂ ಡಾ. ವಿ.ಎಸ್. ಸೋಂದೆ ಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡಿದ್ದ ಮೂರನೇ ಸ್ಮರಣೋಪನ್ಯಾಸ ಹಿನ್ನೆಲೆಯಲ್ಲಿ ಮಾತನಾಡಿದರು. ಕೃಷಿಯಲ್ಲಿ ಆಹಾರ ಬರುತ್ತದೆ. ಕೈಗಾರಿಕೆ ಅಭಿವೃದ್ಧಿ ಆದ ಮೇಲೆ ಸಗಟು ಸಾರಿಗೆ ಬೆಳೆಯಿತು. ೧೯೪೩ರಲ್ಲಿ ಬರಗಾಲ ಉಂಟಾಗಿತ್ತು. ಆಗ ದಾಸ್ತಾನು ಇಡುವುದನ್ನು ರೂಢಿ ಮಾಡಿಕೊಂಡೆವು ಎಂದ ಅವರು, ೮೦ ವರ್ಷಗಳ ಹಿಂದೆ ಗಂಜಿಗೂ ಗತಿಯಿಲ್ಲದ ಪರಿಸ್ಥಿತಿಯನ್ನು ಹಿರಿಯವರಿಂದ ಕೇಳಿದ್ದೇವೆ. ಹಸಿರು ಕ್ರಾಂತಿಯಿಂದ ನಮ್ಮ ದೇಶಕ್ಕೆ ಬೇಕಾಗುವ ಆಹಾರ ಉತ್ಪಾದನೆಯಾಗಿ, ವಿದೇಶಗಳಿಗೂ ರಫ್ತು ಮಾಡಲು ಸಾಧ್ಯವಾಯಿತು ಎಂದು ವಿವರಿಸಿದರು.ರೈತ ಕಿಸೆಯಲ್ಲಿ ಎಷ್ಟು ದುಡ್ಡು ಇದೆ ಎಂಬುದನ್ನು ನೋಡಿ ರಸಗೊಬ್ಬರ ತೆಗೆದುಕೊಂಡು ಹೋಗುತ್ತಾರೆ. ಗಿಡಕ್ಕೆ ಎಷ್ಟು ಬೇಕು ಎಂಬುದನ್ನು ಗಮನಿಸುವುದಿಲ್ಲ. ೧೯೯೨ರಲ್ಲಿ ಗ್ಲೋಬಲೈಸೇಶನ್ ಆಗಿ ರಫ್ತು ಮಾಡುವ ಜತೆಗೆ ಆಮದು ಮಾಡಿಕೊಳ್ಳಲು ಸಾಧ್ಯವಾಯಿತು. ಹಿಂದಿನ ಅಕ್ಕಿ, ಗೋದಿ, ಸಕ್ಕರೆ ಮಾತ್ರ ಪರಿಚಯವಿತ್ತು. ಇಂದಿನ ದಿನದಲ್ಲಿ ಭಾರತ ದೇಶ ಆಹಾರದಲ್ಲಿ ಸ್ವಾವಲಂಬನೆ ಹೊಂದಿಲ್ಲ. ಪುಡ್ ಗ್ರೇನ್‌ನಲ್ಲಿ ಉತ್ಪಾದನೆಯಲ್ಲಿ ಮಾತ್ರ ಸ್ವಾವಲಂಬಿಯಾಗಿದ್ದೇವೆ ಎಂದರು.
ಕೃಷಿಯಲ್ಲಿ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಇಲ್ಲ ಎಂದ ಅವರು, ನಮ್ಮ ದೇಶದಲ್ಲಿ ಯುವ ಜನತೆ ಹೆಚ್ಚಿದ್ದಾರೆ ಎಂಬ ಭ್ರಮೆಯಿಂದ ನಾವು ಮೊದಲು ಹೊರಬರಬೇಕು. ಕರ್ನಾಟಕದಲ್ಲಿ ಯುವ ಜನತೆ ಕೃಷಿಯಲ್ಲಿ ಬಹುವಾಗಿ ಇಲ್ಲ. ದುಡಿಯುವ ಕೈಗಳು ಕಡಿಮೆಯಾಗುತ್ತಿದೆ ಎಂದರು.ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ಡಾ. ವಿ.ಎಸ್. ಸೋಂದೆ ಅವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸೇವೆ ಸಲ್ಲಿಸಿದ್ದರು ಎಂದು ಪ್ರಸ್ತಾಪಿಸಿದರು.
ಫೌಂಡೇಶನ್ ಟ್ರಸ್ಟಿ ರಾಜೇಶ ದಾಖಪ್ಪ, ಬ್ಯಾಂಕ್ ಉಪಾಧ್ಯಕ್ಷ ಸಂತೋಷ ಪಂಡಿತ, ನಿತಿನ ಕಾಸರಗೋಡ ಮತ್ತಿತರರು ಉಪಸ್ಥಿತರಿದ್ದರು. ಅರಣ್ಯ ಕಾಲೇಜಿನ ಡೀನ್ ಆರ್. ವಾಸುದೇವ ಪರಿಚಯಿಸಿದರು. ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಎಸ್. ಹೊಸ್ಮನಿ ಕಾರ್ಯಕ್ರಮ ನಿರೂಪಿಸಿದರು. ಬಾಂಕಿನ ಸಿಬ್ಬಂದಿ ನವ್ಯಾ ಹೆಗಡೆ ಪ್ರಾರ್ಥಿಸಿದರು.