ಕೃಷಿ ಕಸುಬು ಸ್ವಾಭಿಮಾನದ ಪ್ರತೀಕ: ಪಿ.ಐ. ಮಾನೆ

| Published : Aug 05 2024, 12:39 AM IST

ಸಾರಾಂಶ

ಇಡೀ ರಾಷ್ಟ್ರದ ಆರ್ಥಿಕ ಸ್ಥಿತಿ ಕೃಷಿ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಕೃಷಿ ಕ್ಷೇತ್ರವು ಎಲ್ಲದಕ್ಕೂ ಮೂಲ ಆಸರೆಯಾಗಿದೆ ಎಂದು ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ತಿಳಿಸಿದರು.

ದಾಂಡೇಲಿ: ದೇಶದ ೧೪೦ ಕೋಟಿ ಜನರಿಗೆ ರೈತರು ಆಹಾರ ನೀಡುತ್ತಿದ್ದಾರೆ. ಜಗತ್ತಿನಲ್ಲಿ ಸ್ವಾಭಿಮಾನದಿಂದ ಬದುಕುವ ಉದ್ಯೋಗವಿದ್ದರೆ ಅದು ಒಕ್ಕಲುತನ ಮಾತ್ರ. ಒಕ್ಕಲುತನ ಮಾಡುವವನು ನಿಜವಾದ ಕಾಯಕಯೋಗಿ ಎಂದು ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ತಿಳಿಸಿದರು.ನಗರದ ಸಮೀಪದಲ್ಲಿರುವ ಹಸನ್ಮಾಳದಲ್ಲಿ ದಾಂಡೇಲಿಯ ಶ್ರೀಗಂಧ ಟ್ರಸ್ಟ್ ಮತ್ತು ಕೆನರಾ ವೆಲ್ಫೇರ್ ಟ್ರಸ್ಟ್ ಬಿಎಡ್ ಕಾಲೇಜಿನ ಸಹಯೋಗದಲ್ಲಿ ಬಿಎಡ್ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೃಷಿ ಜಾಗೃತಿ ಶಿಬಿರ ಮತ್ತು ಕೃಷಿಕ ಮಹಿಳೆಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಡೀ ರಾಷ್ಟ್ರದ ಆರ್ಥಿಕ ಸ್ಥಿತಿ ಕೃಷಿ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಕೃಷಿ ಕ್ಷೇತ್ರವು ಎಲ್ಲದಕ್ಕೂ ಮೂಲ ಆಸರೆಯಾಗಿದೆ ಎಂದರು.

ಗ್ರಾಮೀಣ ಭಾಗದ ಯುವಕರು ಹಳ್ಳಿಯನ್ನು ತೊರೆದು ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತೆರಳಿದರೆ ನಗರ ಪ್ರದೇಶದ ಯುವಕ- ಯುವತಿಯರು ಕೃಷಿಯುತ್ತ ಆಸಕ್ತಿ ತೋರುತ್ತಿಲ್ಲ. ಇದು ಕೃಷಿ ಕ್ಷೇತ್ರದ ದೊಡ್ಡ ಹಿನ್ನಡೆಯಾಗಿದೆ. ಕೃಷಿ ಪದ್ಧತಿಯನ್ನು ಎಲ್ಲರೂ ಅರಿತುಕೊಳ್ಳಬೇಕು. ಕೋವಿಡ್ ಸಂದರ್ಭ ಐಟಿ ಬಿಟಿ ವೃತ್ತಿಯನ್ನು ತ್ಯಜಿಸಿ ಊರಿಗೆ ಬಂದು ಕೃಷಿ ಕಾಯಕದಲ್ಲಿ ನಿರತರಾಗಿ ಐಟಿ ಬಿಟಿಗಿಂತಲೂ ಅಧಿಕ ಪ್ರಮಾಣದಲ್ಲಿ ಆದಾಯವನ್ನು ಪಡೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಕೃಷಿ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ವೆಲ್ಫೇರ್ ಟ್ರಸ್ಟ್ ಬಿಎಡ್ ಕಾಲೇಜಿನ ಪ್ರಾಚಾರ್ಯೆ ಡಾ. ಸಹನಾ ಸೂರ್ಯವಂಶಿ ಅವರು, ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಶಿಕ್ಷಣದ ಪ್ರಭಾವಕ್ಕೊಳಗಾಗಿ ಹಳ್ಳಿಯ ಜನ ಪಟ್ಟಣಕ್ಕೆ ಉದ್ಯೋಗಕ್ಕೆ ಹೋಗುತ್ತಿರುವುದರಿಂದ ಕೃಷಿ ಕ್ಷೇತ್ರ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಕೃಷಿ ಕ್ಷೇತ್ರದ ಬಗ್ಗೆ ಸಮಗ್ರವಾದ ಅರಿವು ಮತ್ತು ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುವುದು ಅನಿವಾರ್ಯ ಇದೆ ಎಂದರು.

ಶ್ರೀ ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಕೃಷ್ಣ ಪೂಜಾರಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಚಟುವಟಿಕೆಗಳಿಂದ ನಿರೀಕ್ಷಿತ ಪ್ರಮಾಣದ ಆದಾಯ ಬರದೇ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕಾಲಕಾಲಕ್ಕೆ ರೈತರಿಗೆ ಉಪಯುಕ್ತವಾದ ಮತ್ತು ಲಾಭದಾಯಕ ಕೃಷಿ ಚಟುವಟಿಕೆಗಳ ಬಗ್ಗೆ ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ನೀಡಿ ರೈತರ ಬೆಂಬಲಕ್ಕೆ ನಿಲ್ಲುತ್ತಿರುವುದು ಶ್ಲಾಘನೀಯ ಎಂದರು.

ನ್ಯಾಯವಾದಿ ಆಪ್ರೀನ್ ಕಿತ್ತೂರ್, ಪ್ರಗತಿಪರ ಯುವ ಕೃಷಿಕ ಜ್ಯೋತಿಬಾ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಪಾರ್ವತಿ ಮೋಹನ ಪಾಟೀಲ್ ಅವರನ್ನು ಶ್ರೀಗಂಧ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಕೃಷಿ ನಿರ್ದೇಶಕ ಪಿ.ಐ. ಮಾನೆ ಮತ್ತು ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಕೃಷ್ಣಾ ಪೂಜಾರಿ ಅವರಿಂದ ಸಂವಾದ ಕಾರ್ಯಕ್ರಮ ನಡೆಯಿತು.

ಬಳಿಕ ಭತ್ತದ ನಾಟಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿನಿ ಶೃತಿ ಹುಂದ್ರಿ ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ನೀಲಕಂಠ ಜಿ. ನಾಯ್ಕ ಸ್ವಾಗತಿಸಿದರು. ಶ್ರೀಗಂಧ ಟ್ರಸ್ಟಿನ ಅಧ್ಯಕ್ಷ, ಪತ್ರಕರ್ತ ರಾಜೇಶ್ ತಳೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ನಾಗೇಶ ನಾಯ್ಕ ವಂದಿಸಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.